ನವಿ ಮುಂಬೈ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇಡೀ ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ.
ಫೈನಲ್ ಟಿಕೆಟ್‌ಗಳು ಸಂಪೂರ್ಣ ಸೋಲ್ಡ್ ಔಟ್ ಆಗಿದ್ದು, ಕಾಳಸಂತೆಯಲ್ಲಿ ಬೆಲೆ ಮುಗಿಲು ಮುಟ್ಟಿದೆ. ಆದರೆ ಈ ಉತ್ಕಂಠೆಯ ನಡುವೆ ದಕ್ಷಿಣ ಆಫ್ರಿಕಾ ತಂಡ ಮೈಂಡ್ ಗೇಮ್ ಆರಂಭಿಸಿ ಭಾರತಕ್ಕೆ ತೀವ್ರ ವಾರ್ನಿಂಗ್ ನೀಡಿದೆ. ಹರಿಣಗಳ ಪಡೆಯ ನಾಯಕಿ ಲಾರಾ ವೋಲ್ಟಾರ್ಟ್ ಅವರ ಹೇಳಿಕೆಗಳು ಸಂಚಲನ ಮೂಡಿಸಿವೆ.
13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೇರಿವೆ. ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಪುರುಷರ ವಿಶ್ವಕಪ್ ಗೆದ್ದ ನಂತರ ಮಹಿಳಾ ತಂಡವು ಮೊದಲ ಬಾರಿಗೆ ಮುಖ್ಯ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್ ಮತ್ತು ದೀಪ್ತಿ ಶರ್ಮಾ ರೀತಿಯ ಸ್ಟಾರ್ ಆಟಗಾರ್ತಿಯರು ತಂಡದ ಬಲ ನೀಡಲಿದ್ದಾರೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಭಾರತ ಫೈನಲ್‌ಗೇರಿತು. ಆದರೆ ದಕ್ಷಿಣ ಆಫ್ರಿಕಾ ತಂಡವೂ ಕಡಿಮೆಯಿಲ್ಲ. ಲಾರಾ ವೋಲ್ಟಾರ್ಟ್ ನಾಯಕತ್ವದಲ್ಲಿ ಮಾರಿಝಾನೆ ಕಪ್, ಸುನೆ ಲೂಸ್ ಮತ್ತು ಕ್ಲೋ ಟ್ರಯಾನ್ ರೀತಿಯ ಆಟಗಾರ್ತಿಯರು ತಂಡವನ್ನು ಬಲಪಡಿಸಿವೆ.
ಫೈನಲ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಮೈಂಡ್ ಗೇಮ್ ಆರಂಭಿಸಿದೆ. ಇದು 2023ರ ಪುರುಷರ ಏಕದಿನ ವಿಶ್ವಕಪ್ ಫೈನಲ್‌ನ್ನು ನೆನಪಿಸುತ್ತದೆ. ಆಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಫೈನಲ್‌ಗೂ ಮುನ್ನ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದರು. “ಕ್ರೀಡೆಯಲ್ಲಿ ತವರು ದೊಡ್ಡ ಅಭಿಮಾನಿಗಳ ಸದ್ದನ್ನು ನಿಲ್ಲಿಸಿ ಅವರನ್ನು ತಣ್ಣಗೆ ಕೂರುವಂತೆ ಮಾಡುವ ಸಂತೋಷಕ್ಕಿಂತ ದೊಡ್ಡದು ಬೇರೇನಿಲ್ಲ. ನಾವು ಅದನ್ನೇ ಮಾಡಲಿದ್ದೇವೆ.” ಆ ಮಾತುಗಳು ಭಾರತೀಯ ಅಭಿಮಾನಿಗಳನ್ನು ಕೆರಳಿಸಿದ್ದವು.
ಇದೀಗ ಲಾರಾ ವೋಲ್ಟಾರ್ಟ್ ಅದೇ ರಣತಂತ್ರ ಅಳವಡಿಸಿಕೊಂಡಂತೆ ಕಾಣುತ್ತಾರೆ. ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಅವರು ಹೇಳಿದ್ದು, “ನಾವು ಈ ಸಲ ಖಂಡಿತ ಗೆಲ್ಲುತ್ತೇವೆ. ಭಾರತದ ಅಭಿಮಾನಿಗಳ ಜಯಘೋಷವನ್ನು ಸೈಲೆಂಟ್ ಮಾಡಿ ಅವರನ್ನು ಮೂಕವಾಹಿನಿಗಳಾಗಿಸುವುದೇ ನಮ್ಮ ಗುರಿ. ತವರು ಮೈದಾನದ ಒತ್ತಡವನ್ನು ನಾವು ಬಳಸಿಕೊಳ್ಳುತ್ತೇವೆ.” ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಭಾರತೀಯ ಅಭಿಮಾನಿಗಳನ್ನು ಕೆಣಕಿದೆ.
ಆದರೆ ಭಾರತ ತಂಡವು ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರತಿಕ್ರಿಯಿಸಿ ಹೇಳಿದ್ದಾರೆ: “ಮೈಂಡ್ ಗೇಮ್‌ಗಳು ಕ್ರಿಕೆಟ್‌ನ ಭಾಗ. ನಾವು ಮೈದಾನದಲ್ಲಿ ಆಟದ ಮೂಲಕ ಉತ್ತರ ನೀಡುತ್ತೇವೆ. ತವರು ಅಭಿಮಾನಿಗಳ ಬೆಂಬಲ ನಮಗೆ ಶಕ್ತಿ.” ತಂಡದ ಕೋಚ್ ಅಮೋಲ್ ಮುಜುಂದಾರ್ ಅವರು ಆಟಗಾರ್ತಿಯರಿಗೆ ಮಾನಸಿಕ ತರಬೇತಿ ನೀಡುತ್ತಿದ್ದಾರೆ. ಭಾರತದ ಬ್ಯಾಟಿಂಗ್ ಲೈನ್‌ಅಪ್ ಬಲವಾಗಿದ್ದು, ಸ್ಪಿನ್ ಬೌಲಿಂಗ್ ದಕ್ಷಿಣ ಆಫ್ರಿಕಾದ ದೌರ್ಬಲ್ಯವಾಗಿದೆ.





