ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಪಂಜಾಬ್ ವಿರುದ್ಧದ ಮಹತ್ವದ ಪಂದ್ಯದಲ್ಲಿ 23 ರನ್‌ಗಳ ಜಯ ಸಾಧಿಸುವ ಮೂಲಕ ಪ್ಲೇಆಫ್ ಗೆ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ತನ್ನ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ಈ ಪಂದ್ಯ ಭಾನುವಾರ ನಡೆಯಿತು. ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಜೇಕಬ್ ಬೆಥೆಲ್ ಅವರನ್ನು ಕೇವಲ 11 ರನ್‌ಗಳಿಗೆ ಔಟ್ ಮಾಡುವ ಮೂಲಕ ಪಂಜಾಬ್ ಉತ್ತಮ ಆರಂಭ ಪಡೆದಿತ್ತು. ಆದರೆ ಬಳಿಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ಭದ್ರ ನೆಲೆ ಒದಗಿಸಿದರು.
ವಿರಾಟ್ ಕೊಹ್ಲಿ ಕೇವಲ 37 ಎಸೆತಗಳಲ್ಲಿ 58 ರನ್ ಸಿಡಿಸಿದ ಅವರು ಐಪಿಎಲ್ ಇತಿಹಾಸದಲ್ಲಿ ತಮ್ಮ 67ನೇ ಅರ್ಧಶತಕ ದಾಖಲಿಸಿದರು. ಕೊಹ್ಲಿಯ ಬ್ಯಾಟಿಂಗ್‌ನಲ್ಲಿ ಆಕರ್ಷಕ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಸಿದರು. ಮತ್ತೊಂದೆಡೆ ದೇವದತ್ ಪಡಿಕ್ಕಲ್ 45 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಸ್ಫೋಟಕ ಆಟವಾಡಿ ಪಂಜಾಬ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಕೇವಲ 40 ಎಸೆತಗಳಲ್ಲಿ 73 ರನ್ ಚಚ್ಚಿದ ಅವರು ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮ ಕ್ಷಣಗಳಲ್ಲಿ ಟೀಮ್ ಡೇವಿಡ್ ಕೂಡ ವೇಗದ ಬ್ಯಾಟಿಂಗ್ ಪ್ರದರ್ಶಿಸಿ 12 ಎಸೆತಗಳಲ್ಲಿ 28 ರನ್ ಗಳಿಸಿದರು.
ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ ನಾಲ್ಕು ವಿಕೆಟ್ ನಷ್ಟಕ್ಕೆ 222 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಪಂಜಾಬ್ ತಂಡಕ್ಕೆ ಗೆಲ್ಲಲು 223 ರನ್‌ಗಳ ಕಠಿಣ ಗುರಿ ಎದುರಾಯಿತು.
ಬೃಹತ್ ಗುರಿ ಬೆನ್ನತ್ತಿದ ಪಂಜಾಬ್ ಆರಂಭದಲ್ಲಿ ನಿಧಾನಗತಿಯ ಆಟವಾಡಿತು. ಆರಂಭಿಕ ಬ್ಯಾಟರ್‌ಗಳು ದೊಡ್ಡ ಜೊತೆಯಾಟ ಕಟ್ಟಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ ತಂಡವನ್ನು ಹೋರಾಟಕ್ಕೆ ತರುವ ಪ್ರಯತ್ನ ನಡೆಸಿದರು. ಅವರು 56 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ಕೊನಲಿ 37 ರನ್ ಗಳಿಸಿ ನೆರವಾದರೂ, ಅಗತ್ಯ ರನ್‌ರೇಟ್ ಹೆಚ್ಚಾಗುತ್ತಿದ್ದಂತೆ ಪಂಜಾಬ್ ಮೇಲೆ ಒತ್ತಡ ಹೆಚ್ಚಾಯಿತು.
ಆರ್‌ಸಿಬಿ ಬೌಲರ್‌ಗಳು ನಿಯಂತ್ರಿತ ದಾಳಿಯಿಂದ ಪಂಜಾಬ್ ಬ್ಯಾಟರ್‌ಗಳಿಗೆ ಮುಕ್ತವಾಗಿ ರನ್ ಗಳಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಆರ್‌ಸಿಬಿ 23 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಈ ಗೆಲುವಿನೊಂದಿಗೆ ಆರ್‌ಸಿಬಿ ಟೂರ್ನಿಯಲ್ಲಿ ತನ್ನ ಒಂಬತ್ತನೇ ಜಯ ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಬೆಂಗಳೂರು ಪಡೆ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.
ವಿರಾಟ್ ಕೊಹ್ಲಿ ಅವರ ನಿರಂತರ ಬ್ಯಾಟಿಂಗ್ ಪ್ರದರ್ಶನ, ಯುವ ಆಟಗಾರರ ಆತ್ಮವಿಶ್ವಾಸ ಹಾಗೂ ಬೌಲರ್‌ಗಳ ಸಮತೋಲನದ ದಾಳಿಯೇ ಆರ್‌ಸಿಬಿ ಯಶಸ್ಸಿನ ಪ್ರಮುಖ ಕಾರಣವಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಇದೇ ಲಯ ಮುಂದುವರಿಸಲು ತಂಡ ಸಜ್ಜಾಗಿದೆ.
