ಕರ್ನಾಟಕದಲ್ಲಿ ಇಂದು ಆಲಿಕಲ್ಲು ಮಳೆ ಸಾಧ್ಯತೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Untitled design 2026 05 18T073935.083

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಕರಾವಳಿ ಭಾಗಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಮುಖ್ಯವಾಗಿ ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗುಡುಗು-ಮಿಂಚಿನೊಂದಿಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ. ಇದೇ ಕಾರಣಕ್ಕೆ ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಇದರ ಜೊತೆಗೆ ದಕ್ಷಿಣ ಒಳನಾಡಿನ ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆಯ ಸಂಭವ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಜಿಲ್ಲೆಗಳಲ್ಲೂ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಇಲಾಖೆ ಮನವಿ ಮಾಡಿದೆ. ರೈತರು, ಜಾನುವಾರು ಸಾಕಾಣಿಕಾದಾರರು ಬೆಳೆ ಮತ್ತು ಪಶುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಹ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಇನ್ನು ರಾಯಚೂರು, ಯಾದಗಿರಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಕರಾವಳಿ ತೀರದಲ್ಲಿ ಸಮುದ್ರ ಅಲೆಗಳ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಮೇ 19ರವರೆಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲವೊಮ್ಮೆ ಗಾಳಿಯ ವೇಗ 60 ಕಿಲೋಮೀಟರ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

Exit mobile version