ಏರ್ ಶೋನಲ್ಲಿ ಭೀಕರ ದುರಂತ: ಆಕಾಶದಲ್ಲೇ ಡಿಕ್ಕಿ ಹೊಡೆದ ಎರಡು ವಿಮಾನಗಳು..ಪೈಲೆಟ್‌ಗಳು ಜಸ್ಟ್‌‌ ಮಿಸ್.!

Image 2dec68fb

ವಾಷಿಂಗ್ಟನ್:  ಅಮೆರಿಕದ ಐಡಾಹೊದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ನಲ್ಲಿ ನಡೆಯುತ್ತಿದ್ದ ‘ಗನ್ಫೈಟರ್ ಪ್ರೈಸ್ ಏರ್ ಶೋ’ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಯುಎಸ್ ನೌಕಾಪಡೆಯ ಎರಡು EA-18G ಗೌಲರ್ ಯುದ್ಧ ವಿಮಾನಗಳು ಆಕಾಶದಲ್ಲಿ ಅತಿ ಹತ್ತಿರ ಬಂದು ಪರಸ್ಪರ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ವಿಮಾನಗಳಲ್ಲಿದ್ದ ನಾಲ್ವರು ಸಿಬ್ಬಂದಿ ಎಜೆಕ್ಟ್ ಆಗಿ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ನೆಲಕ್ಕಿಳಿದಿದ್ದಾರೆ.

ಅಪಘಾತ ಹೇಗೆ ಸಂಭವಿಸಿತು?

ಪಶ್ಚಿಮ ಐಡಾಹೊದ ವಾಯುನೆಲೆಯಲ್ಲಿ ನಡೆಯುತ್ತಿದ್ದ ಈ ವಾಯು ಪ್ರದರ್ಶನಕ್ಕೆ ಸಾವಿರಾರು ಪ್ರೇಕ್ಷಕರು ಆಗಮಿಸಿದ್ದರು. ಈ ಅಪಘಾತಕ್ಕೆ ಒಳಗಾದ ವಿಮಾನಗಳು EA-18G Growler ಮಾದರಿಯ ಎಲೆಕ್ಟ್ರಾನಿಕ್ ಅಟ್ಯಾಕ್ ಜೆಟ್‌ಗಳು ಎಂದು ಗುರುತಿಸಲಾಗಿದೆ. ಇವು ವಾಷಿಂಗ್ಟನ್‌ನ ವಿಡ್ಬಿ ಐಲ್ಯಾಂಡ್ ಮೂಲದ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್ 129ಕ್ಕೆ ಸೇರಿದ್ದವು. ಪ್ರದರ್ಶನದ ಸಮಯದಲ್ಲಿ ಉನ್ನತ ಮಟ್ಟದ ವೈಮಾನಿಕ ಕಸರತ್ತುಗಳನ್ನು ಪ್ರದರ್ಶಿಸುತ್ತಿದ್ದಾಗ, ಎರಡು ಜೆಟ್‌ಗಳು ಅತೀ ಸಮೀಪಕ್ಕೆ ಬಂದು ಪರಸ್ಪರ ಡಿಕ್ಕಿ ಹೊಡೆದಿವೆ. 

ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿ (ಪೈಲಟ್‌ಗಳು) ತಕ್ಷಣವೇ ಇಜೆಕ್ಟ್ ವ್ಯವಸ್ಥೆಯನ್ನು ಬಳಸಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ. ಪ್ಯಾರಾಶೂಟ್ ಸಹಾಯದಿಂದ ಅವರು ನೆಲಕ್ಕೆ ಇಳಿಯುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಸೇನಾ ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆ ಬಳಿಕ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ ಅನ್ನು ತಕ್ಷಣವೇ ಲಾಕ್‌ಡೌನ್ ಮಾಡಲಾಯಿತು. ಭದ್ರತಾ ಕ್ರಮವಾಗಿ ಏರ್ ಶೋ ಕಾರ್ಯಕ್ರಮದ ಉಳಿದ ಭಾಗಗಳನ್ನು ಕೂಡ ರದ್ದುಪಡಿಸಲಾಯಿತು. ಸ್ಥಳದಲ್ಲಿ ತುರ್ತು ರಕ್ಷಣಾ ಪಡೆಗಳು ಹಾಗೂ ತನಿಖಾ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

Exit mobile version