ಜೈಪುರ: ಭಾರತ ಕ್ರಿಕೆಟ್‌ನ ದಿಗ್ಗಜ ರಾಹುಲ್ ದ್ರಾವಿಡ್, ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ದಿಢೀರ್ ರಾಜೀನಾಮೆ ನೀಡಿದ್ದಾರೆ. 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗೆ ಮುಂಚಿತವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಫ್ರಾಂಚೈಸಿ ಶನಿವಾರ ದೃಢಪಡಿಸಿದೆ.
ಸೆಪ್ಟೆಂಬರ್ 6, 2024 ರಂದು ದ್ರಾವಿಡ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಈ ಹಿಂದೆ ರಾಜಸ್ಥಾನ್ ರಾಯಲ್ಸ್‌ಗೆ ನಾಯಕ ಮತ್ತು ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ದ್ರಾವಿಡ್, 2024 ರಲ್ಲಿ ಮತ್ತೆ ಕೋಚ್ ಆಗಿ ಮರಳಿದ್ದರು. ಆದರೆ, 2025 ರ ಐಪಿಎಲ್ ಸೀಸನ್‌ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ಬಳಿಕ ಈ ರಾಜೀನಾಮೆ ಘೋಷಣೆಯಾಗಿದೆ.
2025 ರ ಐಪಿಎಲ್ ಆವೃತ್ತಿಯಲ್ಲಿ ದ್ರಾವಿಡ್ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೂ, ಬ್ಯಾಂಡೆಜ್ ಸುತ್ತಿಕೊಂಡು ತಂಡಕ್ಕೆ ತರಬೇತಿ ನೀಡಿದ್ದರು. ಅವರ ಕೆಲಸದ ಬದ್ಧತೆ ಆಟಗಾರರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಆದಾಗ್ಯೂ, ತಂಡದ ಫಲಿತಾಂಶಗಳು ದ್ರಾವಿಡ್ ಅವರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. 14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಕೇವಲ ನಾಲ್ಕು ಗೆಲುವುಗಳನ್ನು ಗಳಿಸಿತ್ತು. ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿಯಿತು. ಈ ನಿರಾಶಾದಾಯಕ ಪ್ರದರ್ಶನವು ದ್ರಾವಿಡ್ ಅವರ ರಾಜೀನಾಮೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.
“ರಾಯಲ್ಸ್ ತಂಡದ ಪ್ರಯಾಣದಲ್ಲಿ ರಾಹುಲ್ ಹಲವು ವರ್ಷಗಳಿಂದ ಕೇಂದ್ರಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಗುರುತು ಬಿಟ್ಟಿದೆ,” ಎಂದು ರಾಜಸ್ಥಾನ್ ರಾಯಲ್ಸ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ, ಅದರ ಆಟಗಾರರು ಮತ್ತು ವಿಶ್ವದಾದ್ಯಂತದ ಲಕ್ಷಾಂತರ ಅಭಿಮಾನಿಗಳು ರಾಹುಲ್ ದ್ರಾವಿಡ್‌ಗೆ ಫ್ರಾಂಚೈಸಿಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ರಾಹುಲ್‌ರ ಸೇವೆಯು ತಂಡಕ್ಕೆ ಅಪಾರ ಶಕ್ತಿಯನ್ನು ನೀಡಿತು. ಅವರ ಮಾರ್ಗದರ್ಶನದಲ್ಲಿ ತಂಡವು ಅನೇಕ ಸಾಧನೆಗಳನ್ನು ಮಾಡಿದೆ. ಆದರೆ, ಈಗ ಅವರು ಹೊಸ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ,” ಎಂದು ಫ್ರಾಂಚೈಸಿ ತಿಳಿಸಿದೆ.





