ದಕ್ಷಿಣ ಆಫ್ರಿಕಾದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಟೂರ್ನಿಯ 23ನೇ ಪಂದ್ಯದಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಕಣಕ್ಕಿಳಿದ ಡಿ ಕಾಕ್ ಸಿಡಿಲಬ್ಬರದ ಶತಕ ಬಾರಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡಕ್ಕೆ ಕ್ವಿಂಟನ್ ಡಿ ಕಾಕ್ ಬಲವಾದ ಅಡಿಪಾಯ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು.
ಡಿ ಕಾಕ್ ಕೇವಲ 54 ಎಸೆತಗಳಲ್ಲಿ ಶತಕ ಪೂರೈಸಿ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ 57 ಎಸೆತಗಳಲ್ಲಿ 106 ರನ್ ಗಳಿಸಿದ ಅವರು 11 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
218 ರನ್‌ಗಳ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಕ್ಕೂ ಉತ್ತಮ ಆರಂಭ ದೊರೆಯಿತು. ಆರಂಭಿಕ ಬ್ಯಾಟರ್ ಜಾನ್ಸನ್ ಚಾರ್ಲ್ಸ್ ಕೇವಲ 45 ಎಸೆತಗಳಲ್ಲಿ 78 ರನ್ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಅವರ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 6 ಬೌಂಡರಿಗಳು ಸೇರಿದ್ದವು. ಅಂತಿಮ ಹಂತದಲ್ಲಿ ಆ್ಯಂಡ್ರೆ ಫ್ಲೆಚರ್ 8 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡವನ್ನು 19.1 ಓವರ್‌ಗಳಲ್ಲಿ ಗುರಿ ಮುಟ್ಟಿಸಿದರು. ಪರಿಣಾಮ ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಾಟ್ಸ್ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಪಂದ್ಯದಲ್ಲಿ ತಂಡ ಸೋತರೂ ಕ್ವಿಂಟನ್ ಡಿ ಕಾಕ್ ಅವರ ಶತಕವೇ ಮುಖ್ಯ ಆಕರ್ಷಣೆಯಾಯಿತು. ಈ ಶತಕದೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ 10 ಶತಕ ಬಾರಿಸಿದ ಮೊದಲ ವಿಕೆಟ್‌ಕೀಪರ್ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದರು. ಜೊತೆಗೆ ಕ್ರಿಸ್ ಗೇಲ್, ಬಾಬರ್ ಆಝಂ, ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ 10 ಶತಕಗಳ ಗಡಿ ದಾಟಿದ ಐದನೇ ಬ್ಯಾಟರ್ ಎಂಬ ವಿಶೇಷ ಸಾಧನೆಯನ್ನೂ ಮಾಡಿದರು.
ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಬಾಬರ್ ಆಝಂ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಕ್ವಿಂಟನ್ ಡಿ ಕಾಕ್ 10 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರ ಸಾಲಿಗೆ ಸೇರಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.





