ಬೆಂಗಳೂರು (ಜ.2): ಕರ್ನಾಟಕದ ಹೆಮ್ಮೆಯ ಡೈರಿ ಬ್ರ್ಯಾಂಡ್ ನಂದಿನಿ (Nandini) ಇದೀಗ ಕ್ರಿಕೆಟ್ ಮೈದಾನದಲ್ಲೂ ದೊಡ್ಡ ಆಟಕ್ಕೆ ಸಜ್ಜಾಗುತ್ತಿದೆ. ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಹಂಗಾಮಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೊತೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಮುಂದಾಗಿದೆ. ಈ ಮೂಲಕ ಕಳೆದ ಋತುವಿನಲ್ಲಿ ಆರ್‌ಸಿಬಿಯ ಡೈರಿ ವಿಭಾಗದ ಪ್ರಾಯೋಜಕರಾಗಿದ್ದ ಗುಜರಾತ್ ಮೂಲದ ಅಮೂಲ್‌ಗೆ ಗೇಟ್‌ಪಾಸ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಐಪಿಎಲ್ 2026 (ಸೀಸನ್–19)ಕ್ಕೆ ಸಂಬಂಧಿಸಿದಂತೆ, ಆರ್‌ಸಿಬಿಯ ‘ಅಧಿಕೃತ ಡೈರಿ ಪಾಲುದಾರ’ರಾಗಿ ಎಂಟ್ರಿ ಪಡೆಯಲು ಕೆಎಂಎಫ್ ಆಸಕ್ತಿ ತೋರಿಸಿದೆ. ಈ ಹಕ್ಕುಗಳನ್ನು ಪಡೆದು ಕಾರ್ಯಗತಗೊಳಿಸಲು ಏಜೆನ್ಸಿಯನ್ನು ನೇಮಿಸುವ ಉದ್ದೇಶದಿಂದ ಇತ್ತೀಚೆಗೆ ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಐಪಿಎಲ್, ಬಿಸಿಸಿಐ ಮತ್ತು ಫ್ರಾಂಚೈಸ್‌ನ ನಿಯಮಗಳಿಗೆ ಅನುಗುಣವಾಗಿ ಈ ಒಪ್ಪಂದ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, “ಐಪಿಎಲ್ 2026ರ ಹಿನ್ನೆಲೆಯಲ್ಲಿ ನಾವು ಆರ್‌ಸಿಬಿಯೊಂದಿಗೆ ಅಧಿಕೃತ ಪಾಲುದಾರಿಕೆಯನ್ನು ಪರಿಶೀಲಿಸುತ್ತಿದ್ದೇವೆ. ಹಕ್ಕುಗಳನ್ನು ಪಡೆಯಲು ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಏಜೆನ್ಸಿಗಳನ್ನು ಒಳಗೊಂಡು ಟೆಂಡರ್ ಕರೆಯಲಾಗಿದೆ” ಎಂದು ತಿಳಿಸಿದ್ದಾರೆ.
ನಂದಿನಿ–ಆರ್‌ಸಿಬಿ ಪಾಲುದಾರಿಕೆ ಸಾಧ್ಯವಾದರೆ, ಬ್ರ್ಯಾಂಡ್ ಪ್ರಚಾರದ ದೃಷ್ಟಿಯಿಂದ ಇದು ಕೆಎಂಎಫ್‌ಗೆ ದೊಡ್ಡ ಲಾಭ ತರಲಿದೆ. ಆರ್‌ಸಿಬಿ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಬಲಿಷ್ಠ ಅಭಿಮಾನಿ ಬಳಗ ಹೊಂದಿದೆ. ವಿಶೇಷವಾಗಿ ವಿರಾಟ್ ಕೊಹ್ಲಿ ಆರ್‌ಸಿಬಿಯ ಪ್ರಮುಖ ಮುಖವಾಗಿರುವುದರಿಂದ, ನಂದಿನಿಗೆ ಭಾರೀ ಬ್ರ್ಯಾಂಡ್ ಎಕ್ಸ್‌ಪೋಝರ್ ಸಿಗಲಿದೆ.
ಈ ಕುರಿತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮಾತನಾಡಿ, “ಐಪಿಎಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡ ಆರ್‌ಸಿಬಿ. ಇದರ ಜೊತೆಗೆ ಆರ್‌ಸಿಬಿಗೆ ಭಾರೀ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಇದ್ದಾರೆ. ವಿರಾಟ್ ಕೊಹ್ಲಿಯ ಜನಪ್ರಿಯತೆ ಅಪಾರ. ಕೊಹ್ಲಿ ಹಾಗೂ ಇನ್ನಿಬ್ಬರು ಆರ್‌ಸಿಬಿ ಆಟಗಾರರನ್ನು ನಂದಿನಿ ಪ್ರಚಾರಕ್ಕೆ ಬಳಸಿಕೊಳ್ಳಲು ನಾವು ಯೋಜಿಸುತ್ತಿದ್ದೇವೆ. ಇದರಿಂದ ದೆಹಲಿ, ಮುಂಬೈ, ಉತ್ತರ ಪ್ರದೇಶದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ನಂದಿನಿಯ ವಿಸ್ತರಣೆಗೆ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.
ಹಾಲು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು, ಗುಣಮಟ್ಟದ ದೃಷ್ಟಿಯಿಂದ ನಂದಿನಿ ಈಗಾಗಲೇ ಗ್ರಾಹಕರ ವಿಶ್ವಾಸ ಗಳಿಸಿದೆ. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಪ್ರಚಾರ ಸಿಕ್ಕರೆ, ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಇನ್ನಷ್ಟು ಬಲపడಲಿದೆ ಎಂಬುದು ಕೆಎಂಎಫ್‌ನ ಲೆಕ್ಕಾಚಾರ.
ಇನ್ನೊಂದೆಡೆ, ಅಮೂಲ್ ಕೂಡ ಐಪಿಎಲ್ ಪ್ರಾಯೋಜಕತ್ವದಲ್ಲಿ ಸಕ್ರಿಯವಾಗಿದೆ. ಅಮೂಲ್ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಮಾತನಾಡಿ, “ಕಳೆದ ಋತುವಿನಲ್ಲಿ ನಾವು ಒಂಬತ್ತು ಐಪಿಎಲ್ ತಂಡಗಳನ್ನು ಪ್ರಾಯೋಜಿಸಿದ್ದೇವೆ. ಈ ವರ್ಷ ಯಾವ ತಂಡಗಳೊಂದಿಗೆ ಪಾಲುದಾರಿಕೆ ಇರಲಿದೆ ಎಂಬುದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ” ಎಂದು ಹೇಳಿದ್ದಾರೆ.
ಅಮೂಲ್ vs ನಂದಿನಿ: ರಾಜಕೀಯಕ್ಕೂ ತಟ್ಟಿದ ಪೈಪೋಟಿ
ಅಮೂಲ್ ಮತ್ತು ನಂದಿನಿ ನಡುವಿನ ಪೈಪೋಟಿ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಇತ್ತೀಚೆಗೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್‌ಗೆ ಕಿಯೋಸ್ಕ್ ಸ್ಥಾಪನೆಗೆ ಅನುಮತಿ ನೀಡಿದ ಸರ್ಕಾರದ ನಿರ್ಧಾರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಮತ್ತು ಜೆಡಿಎಸ್, ಕಾಂಗ್ರೆಸ್ ಸರ್ಕಾರ ನಂದಿನಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿತ್ತು. ಬಳಿಕ ಸರ್ಕಾರ ಎಂಟು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುವುದಾಗಿ ಘೋಷಿಸಿತು.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಅಮೂಲ್ ಬೆಂಗಳೂರಿನ ಮಾರುಕಟ್ಟೆಗೆ ತಾಜಾ ಡೈರಿ ಉತ್ಪನ್ನಗಳೊಂದಿಗೆ ಪ್ರವೇಶಿಸಿದ್ದೇ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದು ಕರ್ನಾಟಕದ ಡೈರಿ ಸಹಕಾರಿ ಸಂಸ್ಥೆಗಳು ಮತ್ತು ಸಾವಿರಾರು ರೈತರಿಗೆ ಹಾನಿಕಾರಕವಾಗಬಹುದು ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಎಲ್ಲಾ ಹಿನ್ನೆಲೆಯ ನಡುವೆ, ಐಪಿಎಲ್ 2026ರಲ್ಲಿ ಆರ್‌ಸಿಬಿ ಜೊತೆ ನಂದಿನಿ ಕೈಜೋಡಿಸಿದರೆ, ಅದು ಕೇವಲ ಬ್ರ್ಯಾಂಡಿಂಗ್ ಅಲ್ಲ; ಕರ್ನಾಟಕದ ಹೆಮ್ಮೆಯ ಸಂಕೇತವಾಗಿಯೂ ಹೊರಹೊಮ್ಮುವ ಸಾಧ್ಯತೆ ಇದೆ.





