ಚೆನ್ನೈ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿ, ಕಾಮೆಂಟರಿ ಪ್ಯಾನಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 23 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
60 ವರ್ಷದ ಶಿವರಾಮಕೃಷ್ಣನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಂದ್ಯದ ವೇಳೆ ಟಾಸ್ ಪ್ರಕ್ರಿಯೆ ಅಥವಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನಿಮಗೆ ಯಾಕೆ ಅವಕಾಶ ನೀಡುತ್ತಿರಲಿಲ್ಲ ? ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ಕಾಮೆಂಟೇಟರ್‌ಗಳ ಅನುಪಸ್ಥಿತಿಯಲ್ಲೂ ತಮಗೆ ಅಂತಹ ಉನ್ನತ ಜವಾಬ್ದಾರಿಗಳನ್ನು ನೀಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮತ್ತೊಬ್ಬ ಬಳಕೆದಾರರು ನಿಮ್ಮ ಮೈಬಣ್ಣವೇ ಇದಕ್ಕೆ ಕಾರಣವೇ ? ಎಂದು ಕೇಳಿದಾಗ, ಹೌದು, ನೀವು ಹೇಳುತ್ತಿರುವುದು ಸರಿ. ಇದು ಮೈಬಣ್ಣದ ತಾರತಮ್ಯವೇ ಎಂದು ನೇರವಾಗಿ ಉತ್ತರಿಸಿದ್ದಾರೆ.
I am retiring from commentary for BCCI
— Laxman Sivaramakrishnan (@LaxmanSivarama1) March 20, 2026
ತಮ್ಮ ನಿವೃತ್ತಿಯ ಬಗ್ಗೆ ನಿಗೂಢವಾಗಿ ಬರೆದುಕೊಂಡಿರುವ ಶಿವರಾಮಕೃಷ್ಣನ್, ಇದು ಕೇವಲ ಅಂತ್ಯವಲ್ಲ, ಒಂದು ದೊಡ್ಡ ಕಥೆಯ ಆರಂಭ ಎಂದು ಗೊಂದಲ ಸೃಷ್ಟಿಸಿದ್ದಾರೆ. ನಾನು ಅನುಭವಿಸಿದ ಕಹಿ ಘಟನೆಗಳ ನಿಜವಾದ ಕಥೆಯನ್ನು ಹೇಳಿದಾಗ ಕ್ರಿಕೆಟ್ ಅಭಿಮಾನಿಗಳು ಬೆಚ್ಚಿಬೀಳುತ್ತಾರೆ. ಇಡೀ ಬಿಸಿಸಿಐ ನಂಬಲಾರದ ಸ್ಥಿತಿಗೆ ತಲುಪುತ್ತದೆ. ವ್ಯವಸ್ಥಿತ ಪಕ್ಷಪಾತ ಮತ್ತು ಗುಂಪುಗಾರಿಕೆಯಿಂದಾಗಿ ತಮಗೆ ಸಿಗಬೇಕಾದ ಗೌರವ ಮತ್ತು ಅವಕಾಶಗಳು ಕೈತಪ್ಪಿವೆ ಎಂದು ಬಿಸಿಸಿಐ ವಿರುದ್ದ ವೇಸರ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗ ಶಿವರಾಮಕೃಷ್ಣನ್ ಈ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದೆ. ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಅಯ್ಯೋ ಬೇಡ ! ಕನಿಷ್ಠ ಈ ಐಪಿಎಲ್‌ವರೆಗಾದರೂ ಇರಬಾರದಿತ್ತೇ ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಶಕಗಳ ಕಾಲ ಮೈದಾನದಲ್ಲಿ ಧ್ವನಿಯಾಗಿದ್ದ ವ್ಯಕ್ತಿಯೊಬ್ಬರು ಇಂತಹ ಗಂಭೀರ ಆರೋಪ ಮಾಡಿ ನಿರ್ಗಮಿಸಿರುವುದು ಬಿಸಿಸಿಐ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದೆ. ಬಿಸಿಸಿಐ ಈ ಕುರಿತು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಮಕೃಷ್ಣನ್ ಪರ-ವಿರೋಧದ ಚರ್ಚೆಗಳು ಜೋರಾಗಿವೆ.





