ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಇತಿಹಾಸ ರಚಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 53ನೇ ಶತಕ ಪೂರೈಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ತಮ್ಮ 2ನೇ ಶತಕ ಬಾರಿಸಿ ಹುಬ್ಬೇರಿಸಿದ್ದಾರೆ. ನವೆಂಬರ್ 30 ರಂದು ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಅಮೋಘ 135 ರನ್ ಬಾರಿಸಿದ್ದ ಕೊಹ್ಲಿ ತಾವು ‘ರನ್ ಮೆಷೀನ್’ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಶತಕಗಳ ಸಾಮ್ರಾಟನ ಹೊಸ ಹೆಗ್ಗುರುತು
ವಿರಾಟ್ ಕೊಹ್ಲಿಯ 53ನೇ ಏಕದಿನ ಶತಕವು ಕೇವಲ ಒಂದು ಸಂಖ್ಯೆಯಲ್ಲ.. ಇದು ಅಖಂಡ ಸಂಕಲ್ಪ, ಅಚಲ ಸಾಮರ್ಥ್ಯ ಮತ್ತು ಅದ್ಭುತ ಸ್ಥಿರತೆಯ ಪ್ರತೀಕ. ಸಚಿನ್ ತೆಂಡುಲ್ಕರ್ ಅವರ 49 ಏಕದಿನ ಶತಕಗಳ ವಿಶ್ವ ದಾಖಲೆಯನ್ನು ಮುರಿದ ನಂತರ, ಕೊಹ್ಲಿ ಈಗ ಪ್ರತಿ ಶತಕದೊಂದಿಗೆ ತಮ್ಮದೇ ಆದ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ಅವರ ಶತಕಗಳು ಬಹುತೇಕವಾಗಿ ತಂಡದ ಗೆಲುವಿನೊಂದಿಗೆ ಸಾರ್ಥಕವಾಗುತ್ತಿವೆ. ಈ ಮೂಲಕ ಕೊಹ್ಲಿ ವೈಯಕ್ತಿಕ ಸಾಧನೆಗಳು ತಂಡದ ಸಾಧನೆಗೆ ಪ್ರಮುಖ ಕೊಡುಗೆ ನೀಡುತ್ತಿವೆ.
ಕೊಹ್ಲಿಯ ಹೊಸ ಸ್ವರೂಪ..! ವಯಸ್ಸೆಂಬುದು ಕೇವಲ ಸಂಖ್ಯೆ..!
ಕ್ರಿಕೆಟ್ ಜಗತ್ತಿನಲ್ಲಿ ‘ವಯಸ್ಸು’ ಮಾತನಾಡುತ್ತದೆ ಎಂಬ ನಂಬಿಕೆಗೆ ವಿರಾಟ್ ಕೊಹ್ಲಿ ಪ್ರತ್ಯುತ್ತರವಾಗಿ, ಸತತ ಅರ್ಧ ಶತಕ ಮತ್ತು ಶತಕಗಳ ಮೂಲಕ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿದ್ದಾರೆ. ಅವರ ಇತ್ತೀಚಿನ ಇನ್ನಿಂಗ್ಸ್‌ಗಳು ಅವರ ತಾಂತ್ರಿಕ ಸಮರ್ಥತೆ, ಮಾನಸಿಕ ಬಲ ಮತ್ತು ಫಿಟ್ನೆಸ್ ಇನ್ನೂ ಉತ್ತಮ ಮಟ್ಟದಲ್ಲಿದೆ ಅನ್ನೋದನ್ನ ತೋರಿಸುತ್ತಿದೆ. ಪ್ರತಿ ಇನ್ನಿಂಗ್ಸ್‌ನಲ್ಲೂ ಅವರು ತಮ್ಮ ಗೆಲುವಿನ ಹಸಿವು ಮತ್ತು ತಂಡದ ಬಗ್ಗೆ ಬದ್ಧತೆ ಪ್ರದರ್ಶಿಸುತ್ತಿದ್ದಾರೆ.
ಟೀಂ ಇಂಡಿಯಾಗೆ ಕೊಹ್ಲಿ ಕೊಡುಗೆ ಅಪಾರ: ರನ್ ಮೆಷೀನ್ ಆಟ ನಿಲ್ಲಲ್ಲ..!
53 ಶತಕಗಳು ಪೂರ್ಣಗೊಂಡ ನಂತರವೂ, ವಿರಾಟ್ ಕೊಹ್ಲಿ ಅನ್ ಸ್ಟಾಪಬಲ್ ಆಗಿ ಮುನ್ನುಗ್ಗಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಅವರ 54, 55 ಮತ್ತು ಇನ್ನಷ್ಟು ಶತಕಗಳ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ಇನ್ನಿಂಗ್ಸ್ ಮುಗಿದ ನಂತರವೂ , ಕೊಹ್ಲಿ ದಾಖಲೆಗಳು ಮಾತನಾಡಲಿ ಅನ್ನೋದೇ ಅಭಿಮಾನಿಗಳ ಆಸೆ..





