ಲಂಡನ್: ಭಾರತ ಕ್ರಿಕೆಟ್ ತಂಡವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರ ಅನುಪಸ್ಥಿತಿಯಲ್ಲಿಯೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರ ಡ್ರಾದೊಂದಿಗೆ ಮುಕ್ತಾಯಗೊಳಿಸಿದೆ. ಶುಭಮನ್ ಗಿಲ್ ನಾಯಕತ್ವದ ಈ ತಂಡವು ಕೆನಿಂಗ್ಟನ್ ಓವಲ್‌ನಲ್ಲಿ ನಡೆದ ಐದನೇ ಟೆಸ್ಟ್‌ನಲ್ಲಿ ಕೇವಲ 6 ರನ್‌ಗಳ ರೋಮಾಂಚಕ ಗೆಲುವನ್ನು ದಾಖಲಿಸಿತ್ತು. ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಯು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಗೆಲುವಿನ ಬಳಿಕ ಕನ್ನಡಿಗ ಕೆಎಲ್ ರಾಹುಲ್, ತಂಡದ ಮಾಜಿ ಸಹ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಕೆಎಲ್ ರಾಹುಲ್ ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಐದು ಟೆಸ್ಟ್ ಪಂದ್ಯಗಳಿಂದ 532 ರನ್‌ಗಳನ್ನು ಕಲೆಹಾಕಿ, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಈ ಸಾಧನೆಯ ಮೂಲಕ ಕೊಹ್ಲಿ ಮತ್ತು ಶರ್ಮಾ ಅವರ ಅನುಪಸ್ಥಿತಿಯ ಕೊರತೆಯನ್ನು ತುಂಬಲು ರಾಹುಲ್ ಯಶಸ್ವಿಯಾಗಿದ್ದಾರೆ. “ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆರ್ ಅಶ್ವಿನ್ ಅವರಂತಹ ಆಟಗಾರರಿಲ್ಲದ ಡ್ರೆಸ್ಸಿಂಗ್ ರೂಂ ಖಾಲಿಯಾಗಿತ್ತು. ಅವರಿಲ್ಲದೆ ಆಡುವುದು ವಿಚಿತ್ರ ಅನುಭವವಾಗಿತ್ತು. ಕಿರಿಯ ಆಟಗಾರರು ನನ್ನ ಬಳಿ ಪಿಚ್ ಕಂಡೀಷನ್ಸ್ ಕುರಿತು ಕೇಳಿದಾಗ, ಅವರಿಗೆ ಸಲಹೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡೆ. ಇದು ನನಗೆ ಹೊಸ ಪಾತ್ರವಾಗಿತ್ತು,” ಎಂದು ರಾಹುಲ್ ತಿಳಿಸಿದ್ದಾರೆ.
ಶುಭಮನ್ ಗಿಲ್‌ಗೆ ರಾಹುಲ್ ಮೆಚ್ಚುಗೆ
ನಾಯಕ ಶುಭಮನ್ ಗಿಲ್ ಬಗ್ಗೆ ಮಾತನಾಡಿದ ರಾಹುಲ್, “ಗಿಲ್ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ತಾಂತ್ರಿಕವಾಗಿ ಬಲಿಷ್ಠರಾಗಿರುವ ಅವರು, ತಂಡದ ಆಟಗಾರರೊಂದಿಗೆ ಕಠಿಣ ಪರಿಶ್ರಮ ಮಾಡಿದ್ದಾರೆ. ಅವರು ತಂತ್ರಗಾರಿಕೆಯ ಬದಲಾವಣೆ ಮಾಡಿದಾಗಲೆಲ್ಲಾ ನಾವು ವಿಕೆಟ್‌ಗಳನ್ನು ಪಡೆದಿದ್ದೇವೆ. ಗಿಲ್ ಇನ್ನಷ್ಟು ಬೆಳೆಯಲಿದ್ದಾರೆ ಮತ್ತು ಭಾರತ ಟೆಸ್ಟ್ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.
ಓವಲ್ ಟೆಸ್ಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, “ಈ ಗೆಲುವು ಎಲ್ಲವನ್ನೂ ಅರ್ಥೈಸುತ್ತದೆ. ಚಾಂಪಿಯನ್ಸ್ ಟ್ರೋಫಿ ಗೆಲುವು, ವಿಶ್ವಕಪ್ ಗೆದ್ದ ಸಂತಸವನ್ನು ನಾನು ಅನುಭವಿಸಿದ್ದೇನೆ. ಆದರೆ ಟೆಸ್ಟ್ ಕ್ರಿಕೆಟ್‌ನ ಈ ಗೆಲುವು ವಿಶೇಷವಾದದ್ದು. ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಕುರಿತು ಹಲವು ಅನುಮಾನಗಳಿವೆ. ಆದರೆ ಈ ಸರಣಿಯಲ್ಲಿ ಎರಡೂ ತಂಡಗಳು ಆಡಿದ ರೀತಿಯು ಆ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ,” ಎಂದು ಹೇಳಿದ್ದಾರೆ.