ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ, ಆಲ್‌ರೌಂಡ್ ಪ್ರದರ್ಶನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ 14 ರನ್‌ಗಳ ರೋಚಕ ಜಯ ಗಳಿಸಿತು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗಳಲ್ಲಿ 190 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.
ಕೆಕೆಆರ್ ತಂಡದ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರರಾದ ರೆಹಮಾನುಲ್ಲ ಗುರ್ಬಾಜ್ (26) ಮತ್ತು ಸುನಿಲ್ ನರೈನ್ (27) ಉತ್ತಮ ಆರಂಭ ನೀಡಿದರು. ನಾಯಕ ಅಜಿಂಕ್ಯ ರಹಾನೆ (26) ಮತ್ತು ಅಂಗ್‌ಕ್ರಿಶ್ ರಘುವಂಶಿ (32 ಎಸೆತಗಳಲ್ಲಿ 44 ರನ್, 3 ಬೌಂಡರಿ, 2 ಸಿಕ್ಸರ್) ತಂಡಕ್ಕೆ ಒಳ್ಳೆಯ ಕೊಡುಗೆ ನೀಡಿದರು. ರಿಂಕು ಸಿಂಗ್ (36) ಮತ್ತು ಆಂಡ್ರೆ ರಸೆಲ್ (17) ಅಂತಿಮ ಓವರ್‌ಗಳಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ (3 ವಿಕೆಟ್), ವಿಪ್ರಾಜ್ ನಿಗಮ್ ಮತ್ತು ಅಕ್ಷರ್ ಪಟೇಲ್ (ತಲಾ 2 ವಿಕೆಟ್) ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದರು.
205 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ (45 ಎಸೆತಗಳಲ್ಲಿ 62 ರನ್, 7 ಬೌಂಡರಿ, 2 ಸಿಕ್ಸರ್) ಭರ್ಜರಿ ಅರ್ಧಶತಕದೊಂದಿಗೆ ಉತ್ತಮ ಆರಂಭ ನೀಡಿದರು. ಆದರೆ, ಕರುಣ್ ನಾಯರ್ (15), ಕೆ.ಎಲ್. ರಾಹುಲ್ (7, ರನೌಟ್) ಮತ್ತು ಇತರ ಬ್ಯಾಟರ್‌ಗಳು ಕೆಕೆಆರ್ ಬೌಲರ್‌ಗಳ ದಾಳಿಗೆ ತಡೆಯೊಡ್ಡಲಾಗಲಿಲ್ಲ. ನಾಯಕ ಅಕ್ಷರ್ ಪಟೇಲ್ (23 ಎಸೆತಗಳಲ್ಲಿ 43 ರನ್) ಮತ್ತು ವಿಪ್ರಾಜ್ ನಿಗಮ್ (19 ಎಸೆತಗಳಲ್ಲಿ 38 ರನ್) ಶ್ರಮಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಭಿಷೇಕ್ ಪೊರೆಲ್ (4), ಟ್ರಿಸ್ಟಾನ್ ಸ್ಟಬ್ಸ್ (1), ಆಶುತೋಶ್ ಶರ್ಮಾ (7) ಮತ್ತು ಮಿಚೆಲ್ ಸ್ಟಾರ್ಕ್ (0) ನಿರಾಸೆ ಮೂಡಿಸಿದರು.
ಕೆಕೆಆರ್ ಪರ ಸುನಿಲ್ ನರೈನ್ (3 ವಿಕೆಟ್), ವರುಣ್ ಚಕ್ರವರ್ತಿ (2 ವಿಕೆಟ್), ಅನುಕುಲ್ ರಾಯ್ ಮತ್ತು ವೈಭವ್ ಅರೋರ (ತಲಾ 1 ವಿಕೆಟ್) ಡೆಲ್ಲಿ ಬ್ಯಾಟಿಂಗ್‌ನ್ನು ಕಟ್ಟಿಹಾಕಿದರು.
ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಇದು ಸತತ ಎರಡನೇ ಸೋಲು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು (ಸೂಪರ್ ಓವರ್) ಸಾಧಿಸಿದ್ದು, 3 ಸೋಲು ಕಂಡಿದೆ. ಹೊರಗಿನ ಮೈದಾನಗಳಲ್ಲಿ 6 ಪಂದ್ಯಗಳಲ್ಲಿ 5 ಗೆಲುವು ಮತ್ತು 1 ಸೋಲು ಕಂಡಿದೆ.