ಬೆಂಗಳೂರು: ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನಾಯಕತ್ವದ ‘ಕರ್ನಾಟಕ ಬುಲ್ಲೋಜರ್ಸ್’ ತಂಡ ಸಿಸಿಎಲ್ 2026 (CCL 2026) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಈ ಸಂಭ್ರಮದ ನಡುವೆ ಸುದೀಪ್ ಅವರ ಮಾಲೀಕತ್ವದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichcha’s Kings Bengaluru) ತಂಡ ಈಗ ಮತ್ತೊಂದು ರೋಚಕ ಕಣಕ್ಕೆ ಇಳಿಯುತ್ತಿದೆ. ಫೆಬ್ರವರಿ 14 ಮತ್ತು 15ರಂದು ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF 2026) ನಲ್ಲಿ ಸುದೀಪ್ ತಂಡ ಪಾಲ್ಗೊಳ್ಳುತ್ತಿದೆ.
ಗೋವಾದ ರಸ್ತೆಗಳಲ್ಲಿ ಹೈ-ಸ್ಪೀಡ್ ಪೈಪೋಟಿ
ಗೋವಾದ ಸುಂದರ ರಸ್ತೆಗಳನ್ನು ಈ ರೇಸ್‌ಗಾಗಿ ಹೈ-ಇಂಟೆನ್ಸಿಟಿ ಸ್ಟ್ರೀಟ್ ಸರ್ಕ್ಯೂಟ್‌ಗಳಾಗಿ ಪರಿವರ್ತಿಸಲಾಗಿದೆ. ಈ ರೇಸ್ ಕೇವಲ ವೇಗಕ್ಕೆ ಸೀಮಿತವಾಗಿರದೆ, ಚಾಲಕರ ಧೈರ್ಯ, ಸಂಯಮ ಮತ್ತು ತಾಂತ್ರಿಕ ಕೌಶಲ್ಯದ ಪರೀಕ್ಷೆಯಾಗಲಿದೆ. ಈ ಬಗ್ಗೆ ಉತ್ಸಾಹ ಹಂಚಿಕೊಂಡ ಕಿಚ್ಚ ಸುದೀಪ್, ಸ್ಟ್ರೀಟ್ ರೇಸಿಂಗ್ ಎನ್ನುವುದು ಕೇವಲ ವೇಗದ ಪೈಪೋಟಿ ಅಲ್ಲ, ಇದು ಮನೋಭಾವ ಮತ್ತು ಸ್ಥಿತಿಸ್ಥಾಪಕತ್ವದ ಪರೀಕ್ಷೆ. ಇಲ್ಲಿ ಸಣ್ಣ ತಪ್ಪಿಗೂ ಅವಕಾಶವಿಲ್ಲ. ಸುತ್ತಲೂ ನಗರದ ಜನಜಂಗುಳಿ ಮತ್ತು ಕಟ್ಟಡಗಳ ನಡುವೆ ರೇಸ್ ಮಾಡುವಾಗ ಅದಕ್ಕೆ ತಕ್ಕ ಶಿಸ್ತು ಮತ್ತು ಧೈರ್ಯ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಿಚ್ಚಾಸ್ ಕಿಂಗ್ಸ್ ತಂಡದಲ್ಲಿ ವಿಶ್ವದರ್ಜೆಯ ರೇಸರ್‌ಗಳಿದ್ದಾರೆ. ತಂಡದ ಮುಂಚೂಣಿಯಲ್ಲಿ ಫ್ರೆಂಚ್ ರೇಸರ್ ಹಾಗೂ 2025ರ ಎಫ್4 ಇಂಡಿಯಾ ವೈಸ್ ಚಾಂಪಿಯನ್ ಸಚೆಲ್ ರೊಟೈ ಇದ್ದಾರೆ. ಇವರಿಗೆ ಸಾಥ್ ನೀಡಲು ಭಾರತದ ಭರವಸೆಯ ಯುವ ಪ್ರತಿಭೆ ರುಹಾನ್ ಆಳ್ವಾ ಸಜ್ಜಾಗಿದ್ದಾರೆ. ರುಹಾನ್ ಅವರು ಇಂಡಿಯನ್ ರೇಸಿಂಗ್ ಲೀಗ್‌ನ ಅತಿ ಕಿರಿಯ ರೇಸ್ ವಿಜೇತ ಎಂಬ ಖ್ಯಾತಿ ಹೊಂದಿದ್ದಾರೆ. ಇವರ ಜೊತೆಗೆ ಅಂತರಾಷ್ಟ್ರೀಯ ಅನುಭವ ಹೊಂದಿರುವ ಕೈಲ್ ಕುಮಾರನ್ ಮತ್ತು ಬ್ರಿಟಿಷ್ ಮಹಿಳಾ ರೇಸರ್ ಜೆಮ್ ಹೆಸ್ವರ್ತ್ ತಂಡದ ಶಕ್ತಿಯನ್ನು ಹೆಚ್ಚಿಸಿದ್ದಾರೆ.
ಗೋವಾ ಸ್ಟ್ರೀಟ್ ಸರ್ಕ್ಯೂಟ್ ಹೊಸದಾಗಿರುವುದರಿಂದ ಇಲ್ಲಿ ಯಾವುದೇ ಹಳೆಯ ಡೇಟಾ ಲಭ್ಯವಿಲ್ಲ. ನಮಗೆ ನಿಖರತೆ ಮತ್ತು ನಿಯಂತ್ರಣ ಬಹಳ ಮುಖ್ಯ. ಅತಿಯಾದ ವೇಗಕ್ಕಿಂತ ಚಾಲಕರ ಶಿಸ್ತಿನ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಬೆಂಗಳೂರು ನಗರದ ಮಹತ್ವಾಕಾಂಕ್ಷೆಯನ್ನೇ ನಾವು ಟ್ರ್ಯಾಕ್ ಮೇಲೆ ತರುತ್ತಿದ್ದೇವೆ ಎಂದು ಸುದೀಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವ್ಯಾಲೆಂಟೈನ್ಸ್ ಡೇ ವಾರಾಂತ್ಯದಲ್ಲಿ ಗೋವಾದಲ್ಲಿ ನಡೆಯಲಿರುವ ಈ ರೇಸ್, ಕಿಚ್ಚನ ಅಭಿಮಾನಿಗಳಿಗೆ ಹಬ್ಬದೂಟವಾಗಲಿದೆ.





