ಕಾನ್ಪುರದಲ್ಲಿ ನಡೆದ ಕೆಡಿಎಂಎ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ದುರಂತವೊಂದು ಸಂಭವಿಸಿದೆ. ಉನ್ನಾವೋದ ಸಪ್ರು ಮೈದಾನದಲ್ಲಿ ವೈಎಂಸಿಸಿ ಹಾಗೂ ಪ್ಯಾರಾಮೌಂಟ್ ತಂಡಗಳ ನಡುವಿನ ಪಂದ್ಯ ನಡೆಯುತ್ತಿರುವ ವೇಳೆ ಏಕಾಏಕಿ ಜೇನುನೊಣಗಳ ಗುಂಪು ಮೈದಾನಕ್ಕೆ ದಾಳಿ ನಡೆಸಿದೆ. ಈ ಭೀಕರ ದಾಳಿಯಿಂದ ಕಾನ್ಪುರ ಕ್ರಿಕೆಟ್ ಅಸೋಸಿಯೇಶನ್‌ನ ಹಿರಿಯ ಅಂಪೈರ್ Manik Gupta (ಮಾಣಿಕ್ ಗುಪ್ತಾ) ಮೃತಪಟ್ಟಿದ್ದಾರೆ. ಇನ್ನೂ ಹಲವಾರು ಆಟಗಾರರು ಹಾಗೂ ಮತ್ತೊಬ್ಬ ಅಂಪೈರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಂದ್ಯ ರೋಚಕ ಘಟ್ಟದಲ್ಲಿ ದಾಳಿ
ಪಂದ್ಯ ತೀವ್ರ ಹಂತ ತಲುಪಿದ್ದ ವೇಳೆ ಅಚಾನಕ್ ಜೇನುನೊಣಗಳ ದೊಡ್ಡ ಗುಂಪು ಮೈದಾನದಲ್ಲಿ ಕಾಣಿಸಿಕೊಂಡಿದೆ. ಆಟಗಾರರು ನೀಲಿ ಮತ್ತು ಕಡುನೀಲಿ ಬಣ್ಣದ ಜರ್ಸಿ ಧರಿಸಿದ್ದರೆ, ಅಂಪೈರ್‌ಗಳು ಬಿಳಿ ಉಡುಪಿನಲ್ಲಿ ಮೈದಾನಕ್ಕಿಳಿದಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೇನುನೊಣಗಳು ಮೊದಲಿಗೆ ಬಿಳಿ ಬಟ್ಟೆ ಧರಿಸಿದ್ದ ಅಂಪೈರ್‌ಗಳ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ.
ಮಾಣಿಕ್ ಗುಪ್ತಾ ಹಾಗೂ ಜಗದೀಶ್ ಶರ್ಮಾ ಎಂಬ ಇಬ್ಬರು ಅಂಪೈರ್‌ಗಳ ಮೇಲೆ ನೂರಾರು ಜೇನುನೊಣಗಳು ಮುತ್ತಿಕೊಂಡಿದ್ದು, ಅವರು ತಕ್ಷಣವೇ ನೆಲಕ್ಕುರುಳಿದರು. ಆಟಗಾರರು ಬ್ಯಾಟ್ ಹಾಗೂ ತಲೆಹೆಲ್ಮೆಟ್‌ಗಳ ಸಹಾಯದಿಂದ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ದಾಳಿಯ ತೀವ್ರತೆ ಹೆಚ್ಚಾಗಿತ್ತು.
ಜೇನುನೊಣಗಳ ಕಚ್ಚುವಿಕೆಯಿಂದ 65 ವರ್ಷದ ಮಾಣಿಕ್ ಗುಪ್ತಾ ಗಂಭೀರ ಸ್ಥಿತಿಗೆ ತಲುಪಿದರು. ತಕ್ಷಣವೇ ಅವರನ್ನು ಉನ್ನಾವೋದ ಶುಕ್ಲಗಂಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಲಾಲಾ ಲಜಪತ್ ಆಸ್ಪತ್ರೆಗೆ, ಅಲ್ಲಿಂದ ಲಕ್ಷ್ಮಿಪತ್ ಸಿಂಘಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮಾಣಿಕ್ ಗುಪ್ತಾ ಕಳೆದ 30 ವರ್ಷಗಳಿಂದ ಕಾನ್ಪುರ ಕ್ರಿಕೆಟ್ ಅಸೋಸಿಯೇಶನ್ ಅಡಿಯಲ್ಲಿ ಅಂಪೈರಿಂಗ್ ಮಾಡುತ್ತಿದ್ದರು. ರಣಜಿ ಸೇರಿದಂತೆ ಹಲವು ದೇಶೀಯ ಪಂದ್ಯಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.
ಜೇನುನೊಣಗಳ ದಾಳಿ ಕೇವಲ 10 ನಿಮಿಷಗಳ ಕಾಲ ನಡೆದಿದ್ದರೂ, ಅದರ ಪರಿಣಾಮ ಭಾರೀ ಆಗಿತ್ತು. ಹಲವಾರು ಆಟಗಾರರು ದೇಹದ ವಿವಿಧ ಭಾಗಗಳಲ್ಲಿ ಕಚ್ಚಿಸಿಕೊಂಡಿದ್ದು, ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಅಂಪೈರ್ ಜಗದೀಶ್ ಶರ್ಮಾ ಅವರಿಗೂ ಗಂಭೀರ ಗಾಯಗಳಾಗಿವೆ.
ಮೈದಾನದಲ್ಲಿದ್ದ ಪ್ರೇಕ್ಷಕರು ಆತಂಕದಿಂದ ಓಡಾಟ ನಡೆಸಿದರು. ಕೆಲವರು ನೆಲಕ್ಕಪ್ಪಳಿಸಿ ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸಿದರು. ಪಂದ್ಯವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು.





