ಲಂಡನ್: ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಜೋ ರೂಟ್, ಭಾರತ ವಿರುದ್ಧದ ಆ್ಯಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಸರಣಿಯ ಅಂತಿಮ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ ರೂಟ್, ಹಲವು ದಿಗ್ಗಜರ ದಾಖಲೆಗಳನ್ನು ಮುರಿದಿದ್ದಾರೆ.
ನಾಲ್ಕನೇ ದಿನದಾಟದಂದು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರೂಟ್, 152 ಎಸೆತಗಳಲ್ಲಿ 105 ರನ್ ಗಳಿಸಿ ಶತಕ ಸಿಡಿಸಿದರು. ಈ ಶತಕದೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅವರ 38 ಶತಕಗಳ ದಾಖಲೆಯನ್ನು ಮುರಿದ ರೂಟ್, 39 ಶತಕಗಳೊಂದಿಗೆ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (51 ಶತಕ), ಜಾಕ್ ಕ್ಯಾಲಿಸ್ (45 ಶತಕ), ಮತ್ತು ರಿಕ್ಕಿ ಪಾಂಟಿಂಗ್ (41 ಶತಕ) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಇದರ ಜೊತೆಗೆ, ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರೂಟ್, ಭಾರತದ ಸುನೀಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು. ರೂಟ್ ಭಾರತ ವಿರುದ್ಧ 13 ಶತಕಗಳನ್ನು ಬಾರಿಸಿದ್ದರೆ, ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ 13 ಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ 19 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ರೂಟ್ ಅವರ ಸಾಧನೆ ಇಲ್ಲಿಗೆ ಸೀಮಿತವಾಗಿಲ್ಲ. ಒಂದು ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ 500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯನ್ನು ರೂಟ್ ಮೂರು ಬಾರಿ ಮಾಡಿದ್ದಾರೆ. ಇದಕ್ಕೂ ಮೊದಲು ಎವರ್ಟನ್ ವೀಕ್ಸ್, ಜಹೀರ್ ಅಬ್ಬಾಸ್, ಯೂನಿಸ್ ಖಾನ್, ಗ್ಯಾರಿ ಸೋಬರ್ಸ್, ಮತ್ತು ರಿಕ್ಕಿ ಪಾಂಟಿಂಗ್ ತಲಾ ಎರಡು ಬಾರಿ 500+ ರನ್ ಗಳಿಸಿದ್ದರು. ಈ ದಾಖಲೆಯಲ್ಲಿ ರೂಟ್ ಈಗ ಏಕಾಂಗಿಯಾಗಿ ಮುಂಚೂಣಿಯಲ್ಲಿದ್ದಾರೆ.
ಇದೇ ರೀತಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 6,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಗೌರವವೂ ರೂಟ್‌ಗೆ ಸಂದಿದೆ. ಈ ಸಾಧನೆಯ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನ ಆಧುನಿಕ ಯುಗದಲ್ಲಿ ತಮ್ಮ ಆಧಿಪತ್ಯವನ್ನು ಸಾಬೀತುಪಡಿಸಿದ್ದಾರೆ.