ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಹಾಸಮರಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಪಂದ್ಯ ಆರಂಭವಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳ ನಡುವೆ ಟ್ರೋಫಿ ವಿವಾದ ಸೃಷ್ಟಿಯಾಗಿದೆ.
‘ರೋರ್ 2026’ ವರ್ಸಸ್ ‘ಅನ್‌ಬಾಕ್ಸ್ ಈವೆಂಟ್’
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ‘ರೋರ್ 2026’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಈವೆಂಟ್‌ನಲ್ಲಿ ಸಿಎಸ್‌ಕೆ ಹಳೆಯ ಮತ್ತು ಹೊಸ ಆಟಗಾರರು ಭಾಗವಹಿಸಿ ಸಂಭ್ರಮಿಸಿದರು. ಆದರೆ, ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರ್‌ಸಿಬಿ ಅಭಿಮಾನಿಗಳು ಕೆರಳಿದ್ದಾರೆ. ಸಿಎಸ್‌ಕೆ ತಂಡವು ಆರ್‌ಸಿಬಿಯ ಪ್ರಸಿದ್ಧ ಅನ್‌ಬಾಕ್ಸ್ ಈವೆಂಟ್ ಮಾದರಿಯನ್ನು ಕಾಪಿ ಮಾಡಿದೆ ಎಂದು ಕಿಚಾಯಿಸಲು ಶುರು ಮಾಡಿದರು.
RCB fans accused CSK of copying, so CSK made the event unique by showcasing multiple trophies (won by their men’s team). pic.twitter.com/H3ouA8mXR0
— TukTuk Academy (@TukTuk_Academy) March 22, 2026
ಟ್ರೋಲ್ ಮಾಡಿದವರಿಗೆ ‘ಟ್ರೋಫಿ’ ಮೂಲಕವೇ ಉತ್ತರ
ಆರ್‌ಸಿಬಿ ಅಭಿಮಾನಿಗಳ ಕಾಪಿ ಕ್ಯಾಟ್ ಟ್ರೋಲ್‌ಗಳಿಗೆ ಸಿಎಸ್‌ಕೆ ಅಭಿಮಾನಿಗಳು, ಸಿಎಸ್‌ಕೆ ಫ್ರಾಂಚೈಸಿ ಮೈದಾನದ ಮಧ್ಯದಲ್ಲಿ ತಾವು ಇದುವರೆಗೆ ಗೆದ್ದಿರುವ ಎಲ್ಲಾ ಟ್ರೋಫಿಗಳನ್ನು ಪ್ರದರ್ಶಿಸುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ.
ನಾವು ಕಾರ್ಯಕ್ರಮವನ್ನು ಕಾಪಿ ಮಾಡಿರಬಹುದು, ಆದರೆ ನಮ್ಮ ಬಳಿ ಪ್ರದರ್ಶಿಸಲು ಐದು ಐಪಿಎಲ್ ಟ್ರೋಫಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಟ್ರೋಫಿಗಳು ಸೇರಿದಂತೆ ಒಟ್ಟು 7 ಟ್ರೋಫಿಗಳಿವೆ ಎಂದು ಸಿಎಸ್‌ಕೆ ಫ್ಯಾನ್ಸ್ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮೈದಾನಕ್ಕಿಳಿದ 7 ಟ್ರೋಫಿಗಳು
ಸಿಎಸ್‌ಕೆ ಪರ ಕಣಕ್ಕಿಳಿದಿದ್ದ ವಿವಿಧ ಕಾಲದ ಆಟಗಾರರು ತಂಡ ಗೆದ್ದಿದ್ದ 2010, 2011, 2018, 2021 ಮತ್ತು 2023ರ ಐಪಿಎಲ್ ಟ್ರೋಫಿಗಳನ್ನು ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಸಾಲಾಗಿ ಮೈದಾನಕ್ಕೆ ತಂದಿಟ್ಟು ಪ್ರದರ್ಶಿಸಿದರು. ನಿಮ್ಮ ಬಳಿ ಈವೆಂಟ್ ಮಾತ್ರ ಇದೆ, ನಮ್ಮ ಬಳಿ ಇತಿಹಾಸವೇ ಇದೆ ಎಂಬ ಅರ್ಥದಲ್ಲಿ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಕೆಣಕಿದ್ದಾರೆ.
ಮಾರ್ಚ್ 28ರಂದು ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್‌ನಲ್ಲಿ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಬೆಂಗಳೂರು ಅಭಿಮಾನಿಗಳು ಮತ್ತು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಅಭಿಮಾನಿಗಳ ನಡುವಿನ ಈ ಕಿತ್ತಾಟವು 2026ರ ಐಪಿಎಲ್ ಟೂರ್ನಿಯು ಎಷ್ಟು ರೋಚಕವಾಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
