ಉಕ್ರೇನ್‌ನ ಸಮುದ್ರದಲ್ಲಿ ಕ್ಷಿಪಣಿ ದಾಳಿ: ಸಂಕಷ್ಟದಲ್ಲಿ ಸಿಲುಕಿದ 13 ಭಾರತೀಯ ನಾವಿಕರು

Your paragraph text (6)

ಕೈವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಕ್ರೇನ್‌ನ ಚೋರ್ನೊಮೊರ್ಸ್ಕ್ (Chornomorsk) ಬಂದರಿನ ಸಮೀಪ ಹಡಗಿನ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆದಿದೆ. ಈ ಹಿನ್ನೆಲೆ ವಾಣಿಜ್ಯ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ 13 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಭಾರತೀಯ ನಾವಿಕರ ಒಕ್ಕೂಟ (FSUI) ಈ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದು, ಹಡಗಿನ ಸುತ್ತಮುತ್ತ ನಿರಂತರವಾಗಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಡೆಯುತ್ತಿರುವುದರಿಂದ ಸಿಬ್ಬಂದಿ ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ತಿಳಿಸಿದೆ. ಯಾವುದೇ ಕ್ಷಣದಲ್ಲಾದರೂ ಹಡಗಿನ ಮೇಲೆ ನೇರವಾಗಿ ಕ್ಷಿಪಣಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.

FSUI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಚೋರ್ನೊಮೊರ್ಸ್ಕ್ ಬಂದರಿನ ಸಮೀಪದ ಪ್ರದೇಶದಲ್ಲಿ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಸ್ಫೋಟಗಳ ಶಬ್ದ ಹಾಗೂ ಹೊಗೆ ನಡುವೆ ನಾವಿಕರು ಹಡಗಿನಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯ ನಾವಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿ ಮಾಡಿದೆ. ಜೊತೆಗೆ, ಹಡಗಿನ ಮಾಲೀಕರು ಹಾಗೂ ಸಂಬಂಧಿತ ಶಿಪ್ಪಿಂಗ್ ಕಂಪನಿಗಳು ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದೆ.

ಈ ಘಟನೆಯ ನಡುವೆ FSUI ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಡಗಿನಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ವಿಡಿಯೊವೊಂದನ್ನು ಹಂಚಿಕೊಂಡಿದೆ. ವಿಡಿಯೊದಲ್ಲಿ ಬಂದರಿನ ಸುತ್ತಮುತ್ತ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಕಂಡುಬರುತ್ತಿದೆ. ಸ್ಫೋಟಗಳ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.

ಈ ಪ್ರಕರಣದ ಕುರಿತು ಭಾರತ ವಿದೇಶಾಂಗ ಸಚಿವಾಲಯ (MEA) ಅಥವಾ ಸಂಬಂಧಿತ ಹಡಗು ಕಂಪನಿಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.

ಕಪ್ಪು ಸಮುದ್ರ ಪ್ರದೇಶವು ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಜಾಗತಿಕ ವ್ಯಾಪಾರ ಹಾಗೂ ಸಮುದ್ರ ಸಾರಿಗೆಗೆ ಅತ್ಯಂತ ಅಪಾಯಕಾರಿ ವಲಯವಾಗಿ ಪರಿಣಮಿಸಿದೆ. ಧಾನ್ಯ, ತೈಲ ಮತ್ತು ಇತರ ಸರಕುಗಳನ್ನು ಸಾಗಿಸುವ ವಾಣಿಜ್ಯ ಹಡಗುಗಳಿಗೂ ಪದೇ ಪದೇ ಭದ್ರತಾ ಸವಾಲುಗಳು ಎದುರಾಗುತ್ತಿವೆ. ಬಂದರುಗಳ ಮೇಲೆ ನಡೆಯುತ್ತಿರುವ ದಾಳಿಗಳ ಪರಿಣಾಮ ಅನೇಕ ಹಡಗುಗಳು ಮಧ್ಯದಲ್ಲೇ ಸಿಲುಕುವ ಘಟನೆಗಳು ವರದಿಯಾಗುತ್ತಿವೆ.

ಇದಕ್ಕೂ ಮೊದಲು, ಜುಲೈ 18ರಂದು ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದರು. ಆ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ಮತ್ತೊಮ್ಮೆ 13 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಹೊರಬಿದ್ದಿರುವುದು ಆತಂಕ ಹೆಚ್ಚಿಸಿದೆ.

Exit mobile version