ತೆಹ್ರಾನ್ ಆಗಸದಲ್ಲಿ UFO ಹಾರಾಟ: ಅನ್ಯಗ್ರಹ ಜೀವಿಗಳ ವಾಹನ ಎಂಬ ಶಂಕೆ!

Your paragraph text 2026 09 22T133036.732

ತೆಹ್ರಾನ್: ಇರಾನ್ ರಾಜಧಾನಿ ತೆಹ್ರಾನ್‌ನ ಆಗಸದಲ್ಲಿ ವಿಚಿತ್ರವಾಗಿ ಹಾರುತ್ತಿದ್ದ ನಿಗೂಢ ವಸ್ತುವಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿವೆ. ಸೆಪ್ಟೆಂಬರ್ 20 ಮತ್ತು 21ರಂದು ಆಕಾಶದಲ್ಲಿ ಈ ವಸ್ತು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ಕೆಲವರು UFO ಎಂದು ಶಂಕಿಸಿದ್ದಾರೆ. ಆದರೆ ಅದು ನಿಜವಾಗಿಯೂ UFO ಅಥವಾ ಅನ್ಯಗ್ರಹ ಜೀವಿಗಳ ವಾಹನ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆ ಸದ್ಯಕ್ಕೆ ಲಭ್ಯವಾಗಿಲ್ಲ.

ವೈರಲ್ ಆಗಿರುವ ವಿಡಿಯೋದಲ್ಲಿ ಆಕಾಶದಲ್ಲಿ ವಿವಿಧ ಬಣ್ಣಗಳ ಬೆಳಕು ಕಾಣಿಸುತ್ತಿದ್ದು, ಒಂದು ವಿಚಿತ್ರ ಹಾರುವ ವಸ್ತು ನಿಧಾನವಾಗಿ ಚಲಿಸುವಂತೆ ಗೋಚರಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅದು ಮೋಡಗಳ ನಡುವೆ ದೂರ ಸಾಗಿದಂತೆ ಕಂಡುಬಂದಿದೆ. ಈ ದೃಶ್ಯಗಳನ್ನು ತೆಹ್ರಾನ್‌ನ ಕೆಲವು ನಿವಾಸಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.

UFOನಾ? ಡ್ರೋನ್‌ನಾ?

ವಿಚಿತ್ರ ಹಾರುವ ವಸ್ತು ಕಂಡುಬಂದಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಇದು ಅನ್ಯಗ್ರಹ ಜೀವಿಗಳ ವಾಹನವಾಗಿರಬಹುದೇ? ಅಥವಾ ಸಾಮಾನ್ಯ ಡ್ರೋನ್ ಆಗಿರಬಹುದೇ? ಎಂಬ ಪ್ರಶ್ನೆಗಳು ಎದ್ದಿವೆ.

ವೈರಲ್ ವಿಡಿಯೋದಲ್ಲಿ ಕಾಣಿಸುವ ವಸ್ತುವಿನ ಸ್ವರೂಪ ಸ್ಪಷ್ಟವಾಗಿಲ್ಲ. ದೂರದಿಂದ ಚಿತ್ರೀಕರಿಸಿರುವುದರಿಂದ ಅದರ ಗಾತ್ರ, ಆಕಾರ ಮತ್ತು ನಿಖರವಾದ ಎತ್ತರವನ್ನು ನಿರ್ಧರಿಸುವುದು ಕಷ್ಟವಾಗಿದೆ. ಹೀಗಾಗಿ ವಿಡಿಯೋ ಆಧಾರದ ಮೇಲೆ ಅದು UFO ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಶಬ್ಧ ಕೇಳಿಸಲಿಲ್ಲ ಎಂಬ ವಾದ

ಈ ನಿಗೂಢ ವಸ್ತುವನ್ನು ನೋಡಿದ ಕೆಲವರು ಅದು ಯಾವುದೇ ಶಬ್ಧವಿಲ್ಲದೆ ಆಕಾಶದಲ್ಲಿ ಹಾರಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. 

ಇದೇ ಕಾರಣಕ್ಕೆ ಇದು ಡ್ರೋನ್ ಅಲ್ಲ, ಬೇರೆ ಯಾವುದೋ ಹಾರುವ ವಸ್ತುವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ದೂರ, ಗಾಳಿಯ ವೇಗ, ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಹಾಗೂ ಸುತ್ತಮುತ್ತಲಿನ ಶಬ್ಧದಂತಹ ಅಂಶಗಳು ಪರಿಣಾಮ ಬೀರುವುದರಿಂದ ಕೇವಲ ಶಬ್ಧ ಕೇಳಿಸದಿರುವುದರಿಂದ ಅದರ ಸ್ವರೂಪ ನಿರ್ಧರಿಸಲು ಸಾಧ್ಯವಿಲ್ಲ.

ಗಾಳಿಪಟಕ್ಕೆ ಎಲ್‌ಇಡಿ ಲೈಟ್?

ಇನ್ನು ಕೆಲವರು ಮತ್ತೊಂದು ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ. ಗಾಳಿಪಟಕ್ಕೆ ಎಲ್‌ಇಡಿ ಲೈಟ್ ಅಳವಡಿಸಿ ರಾತ್ರಿ ವೇಳೆ ಹಾರಿಸಿರಬಹುದು ಎಂಬ ಶಂಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಆದರೆ ಗಾಳಿಪಟವು ಮೋಡಗಳ ನಡುವೆ ಕಾಣಿಸಿಕೊಂಡು, ಬಳಿಕ ಏಕಾಏಕಿ ದೂರಕ್ಕೆ ಸಾಗಿದಂತೆ ದೃಶ್ಯ ಕಾಣಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗಾಳಿಯ ವೇಗ ಮತ್ತು ದಿಕ್ಕಿನ ಆಧಾರದ ಮೇಲೆ ಗಾಳಿಪಟದ ಚಲನೆ ಹೇಗಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

ಸೆಪ್ಟೆಂಬರ್ 20-21ರಂದು ದೃಶ್ಯ

ಸೆಪ್ಟೆಂಬರ್ 20 ಹಾಗೂ 21ರಂದು ತೆಹ್ರಾನ್ ಆಗಸದಲ್ಲಿ ಈ ನಿಗೂಢ ಬೆಳಕು ಅಥವಾ ವಸ್ತು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇರಾನ್ ಕಾಲಮಾನದಲ್ಲಿ ಭಾನುವಾರ ಸಂಜೆ ಸುಮಾರು 7.30ರ ವೇಳೆಗೆ ದೃಶ್ಯ ಕಂಡುಬಂದಿದೆ ಎಂದು ಕೆಲವು ವಿಡಿಯೋಗಳನ್ನು ಹಂಚಿಕೊಂಡವರು ಹೇಳಿದ್ದಾರೆ.

ಈ ದೃಶ್ಯ ಕಂಡ ಕೆಲವರು ತಕ್ಷಣವೇ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಬಳಿಕ ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಒಂದೇ ಘಟನೆಯ ವಿವಿಧ ವಿಡಿಯೋಗಳು ವೈರಲ್ ಆಗುತ್ತಿರುವುದರಿಂದ ಜನರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಅಮೆರಿಕದ ಹೆಸರಿನಲ್ಲಿ ವದಂತಿ

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಈ ನಿಗೂಢ ಹಾರಾಟಕ್ಕೆ ಸಂಬಂಧಿಸಿದಂತೆ ಹಲವು ವದಂತಿಗಳೂ ಹರಿದಾಡುತ್ತಿವೆ. ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಇದು ಅಮೆರಿಕದ ತಂತ್ರಗಾರಿಕೆಯ ಭಾಗವಾಗಿರಬಹುದು ಎಂದು ಊಹಿಸಿದ್ದಾರೆ.

ಆದರೆ ಈ ರೀತಿಯ ಹೇಳಿಕೆಗಳಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ವಾಸ್ತವವೆಂದು ಪರಿಗಣಿಸುವುದು ಸೂಕ್ತವಲ್ಲ.

 

Exit mobile version