ಭಾರತ-ಪಾಕಿಸ್ತಾನ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಹಬ್ಬ ಇಂದಿನಿಂದ ಮತ್ತೆ ಆರಂಭವಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಸಂಜೆ 7:30ಕ್ಕೆ ಮುಖಾಮುಖಿಯಾಗಲಿವೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ.
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲುಗಳೊಂದಿಗೆ 16 ಅಂಕಗಳನ್ನು ಗಳಿಸಿ, +0.482 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಗುಜರಾತ್ ಟೈಟನ್ಸ್ 16 ಅಂಕಗಳೊಂದಿಗೆ +0.793 ನೆಟ್ ರನ್‌ರೇಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, 18 ಅಂಕಗಳೊಂದಿಗೆ ಪ್ಲೇ-ಆಫ್‌ಗೆ ಪ್ರವೇಶಿಸಿ, 18 ಆವೃತ್ತಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಲಿದೆ.
ಅಜಿಂಕ್ಯಾ ರಹಾನೆ ನೇತೃತ್ವದ ಕೆಕೆಆರ್, 12 ಪಂದ್ಯಗಳಲ್ಲಿ 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಆಕಾಂಕ್ಷೆಯನ್ನು ಜೀವಂತವಾಗಿರಿಸಲು ಕೆಕೆಆರ್‌ಗೆ ಇಂದಿನ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಅತ್ಯಗತ್ಯ. ಸೋತರೆ, ಪ್ಲೇ-ಆಫ್‌ನಿಂದ ಹೊರಬೀಳುವ 4ನೇ ತಂಡವಾಗಲಿದೆ. ಇದರಿಂದ ಕೆಕೆಆರ್‌ಗೆ ಈ ಪಂದ್ಯ ‘ಮಾಡು ಇಲ್ಲವೇ ಮಡಿ’ ಎಂಬಂತಿದೆ.
ತಂಡಗಳ ಸ್ಥಿತಿಗತಿ
ಆರ್‌ಸಿಬಿ ತನ್ನ ಕೊನೆಯ 4 ಪಂದ್ಯಗಳಲ್ಲಿ ಅಜೇಯವಾಗಿದ್ದು, ತವರಿನಲ್ಲಿ 3ನೇ ಗೆಲುವು ಮತ್ತು ಸತತ 5ನೇ ಜಯದ ನಿರೀಕ್ಷೆಯಲ್ಲಿದೆ. ಕೆಕೆಆರ್ ಕೊನೆಯ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಕಂಡಿದ್ದು, ಪ್ಲೇ-ಆಫ್‌ಗೆ ಉಳಿಯಲು ಗೆಲುವಿನ ಒತ್ತಡದಲ್ಲಿದೆ.
ರಜತ್ ಪಾಟಿದಾರ್ ಲಭ್ಯತೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯಗೊಂಡಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಕೆಕೆಆರ್ ವಿರುದ್ಧ ಆಡುವ ಸಾಧ್ಯತೆಯಿದೆ. ಶುಕ್ರವಾರದ ತಾಲೀಮಿನಲ್ಲಿ ಭರ್ಜರಿ ಅಭ್ಯಾಸ ನಡೆಸಿರುವ ಅವರು ತಂಡಕ್ಕೆ ಬಲ ತಂದಿದ್ದಾರೆ.
ಮಳೆಯ ಆತಂಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಬೌಲಿಂಗ್‌ಗೆ ಸಹಕಾರಿ ಈ ಪಿಚ್‌ನಲ್ಲಿ ಮಳೆ ಪ್ರಭಾವ ಬೀರಬಹುದು. ಒಂದು ವೇಳೆ ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ 1 ಅಂಕ ದೊರೆಯಲಿದೆ. ಇದರಿಂದ ಆರ್‌ಸಿಬಿಗೆ ಪ್ಲೇ-ಆಫ್ ಖಚಿತವಾಗಲಿದೆ.