ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ 2025 ಇಂದಿನಿಂದ ಮತ್ತೆ ಆರಂಭವಾಗುತ್ತಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮತ್ತೆ ಐಪಿಎಲ್ ಆಡಲು ಭಾರತಕ್ಕೆ ವಾಪಸ್ ಬರುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಗಡಿ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಐಪಿಎಲ್ ಟೂರ್ನಮೆಂಟ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದಾಗ, ಭಾರತ-ಪಾಕ್ ಯುದ್ಧ ಭೀತಿಯಿಂದಾಗಿ ಪಂದ್ಯ ಅರ್ಧದಲ್ಲೇ ನಿಂತಿತ್ತು. ಈ ಸಂದರ್ಭದಲ್ಲಿ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ತೆರಳಿದ್ದರು. ಈಗ ಲೀಗ್ ಮತ್ತೆ ಶುರುವಾಗಿದ್ದರೂ, ಆಸ್ಟ್ರೇಲಿಯಾದ ಎಾರಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಭಾರತಕ್ಕೆ ವಾಪಸ್ ಬರದಿರಲು ನಿರ್ಧರಿಸಿದ್ದಾರೆ. ಈ ನಿರ್ಧಾರವನ್ನು ಅವರು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಹರಾಜಿನಲ್ಲಿ ಸ್ಟಾರ್ಕ್‌ರನ್ನು 11.75 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಸ್ಟಾರ್ಕ್ ಈ ಸೀಸನ್‌ನ ಉಳಿದ ಪಂದ್ಯಗಳಿಗೆ ಲಭ್ಯವಿಲ್ಲದಿರುವುದರಿಂದ, ಬಿಸಿಸಿಐ ನಿಯಮಾವಳಿಯಂತೆ ಅವರ ಸಂಭಾವನೆಯಲ್ಲಿ ಸುಮಾರು 3.5 ಕೋಟಿ ರೂ. ಕಡಿತವಾಗಬಹುದು. ಈ ಸೀಸನ್‌ನಲ್ಲಿ ಸ್ಟಾರ್ಕ್ 11 ಪಂದ್ಯಗಳಲ್ಲಿ 10.16 ಇಕಾನಮಿಯೊಂದಿಗೆ 14 ವಿಕೆಟ್‌ಗಳನ್ನು ಪಡೆದಿದ್ದು, ಒಂದು ಪಂದ್ಯದಲ್ಲಿ 5 ವಿಕೆಟ್‌ಗಳ ಸಾಧನೆಯನ್ನೂ ಮಾಡಿದ್ದರು. ಈ ಮ್ಯಾಚ್ ವಿನ್ನರ್‌ನ ಅಲಭ್ಯತೆ ಡೆಲ್ಲಿಗೆ ದೊಡ್ಡ ಹೊಡೆತವಾಗಲಿದೆ.
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದಿತ್ತು. ಆದರೆ, ಮುಂಬೈ ಇಂಡಿಯನ್ಸ್‌ನಿಂದ ಸತತ ಗೆಲುವಿಗೆ ಬ್ರೇಕ್ ಬಿದ್ದಿತ್ತು. ಸದ್ಯ 11 ಪಂದ್ಯಗಳಿಂದ 6 ಗೆಲುವು, 4 ಸೋಲು ಮತ್ತು 1 ರದ್ದಾದ ಪಂದ್ಯದೊಂದಿಗೆ 13 ಅಂಕಗಳೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಉಳಿದ 3 ಪಂದ್ಯಗಳಲ್ಲಿ ಕನಿಷ್ಠ 2 ಗೆಲುವು ಸಾಧಿಸಿದರೆ ಡೆಲ್ಲಿ ಪ್ಲೇಆಫ್‌ಗೆ ಲಗ್ಗೆಯಿಡಬಹುದು. ಆದರೆ, ಒಂದಕ್ಕಿಂತ ಹೆಚ್ಚು ಸೋಲು ಕಂಡರೆ ಪ್ಲೇಆಫ್ ಕನಸು ಒಡೆಯುವ ಸಾಧ್ಯತೆಯಿದೆ.