ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 203 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ 19.2 ಓವರ್‌ಗಳಲ್ಲಿ 204 ರನ್‌ಗಳನ್ನು ಬಾರಿಸಿ 7 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.
ಕನ್ನಡಿಗ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಅವರು ಕೇವಲ 14 ಎಸೆತಗಳಲ್ಲಿ 1 ಸಿಕ್ಸ್ ಮತ್ತು 4 ಬೌಂಡರಿಗಳೊಂದಿಗೆ 28 ರನ್‌ಗಳನ್ನು ಕಲೆಹಾಕಿದರು. ಈ ಒಂದು ಸಿಕ್ಸ್‌ನೊಂದಿಗೆ ರಾಹುಲ್ ಐಪಿಎಲ್‌ನಲ್ಲಿ 200 ಸಿಕ್ಸ್‌ಗಳನ್ನು ಪೂರೈಸಿದರು. ವಿಶೇಷವೆಂದರೆ, ಅವರು ಕೇವಲ 129 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ, ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್‌ನಿಂದ ಅತೀ ಕಡಿಮೆ ಇನಿಂಗ್ಸ್‌ಗಳಲ್ಲಿ 200 ಸಿಕ್ಸ್‌ಗಳ ದಾಖಲೆಯಾಗಿದೆ.
ಈ ದಾಖಲೆಯನ್ನು ಈ ಮೊದಲು ಸಂಜು ಸ್ಯಾಮ್ಸನ್ 159 ಇನಿಂಗ್ಸ್‌ಗಳಲ್ಲಿ ಮತ್ತು ಎಂಎಸ್ ಧೋನಿ 165 ಇನಿಂಗ್ಸ್‌ಗಳಲ್ಲಿ ಸ್ಥಾಪಿಸಿದ್ದರು. ಆದರೆ, ಕೆಎಲ್ ರಾಹುಲ್ ಈಗ 129 ಇನಿಂಗ್ಸ್‌ಗಳೊಂದಿಗೆ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ರಾಹುಲ್ ಐಪಿಎಲ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಈಗಾಗಲೇ 4,949 ರನ್‌ಗಳನ್ನು ಕಲೆಹಾಕಿದ್ದಾರೆ. ಮುಂದಿನ ಪಂದ್ಯದಲ್ಲಿ ಕೇವಲ 51 ರನ್‌ಗಳನ್ನು ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 5,000 ರನ್‌ಗಳನ್ನು ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ರಾಹುಲ್ ಬರೆಯಬಹುದು. ಈ ಸಾಧನೆಗಾಗಿ ಎಲ್ಲರ ಕಣ್ಣು ರಾಹುಲ್‌ನ ಮೇಲೆ ನೆಟ್ಟಿದೆ.