ನಾಗ್ಪುರ, ಜ.21: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸರಣಿ ಎರಡೂ ತಂಡಗಳಿಗೆ ಅತ್ಯಂತ ಮಹತ್ವ ಪಡೆದುಕೊಂಡಿದೆ..
ನಾಗ್ಪುರದ ವಿಸಿಎ ಸ್ಟೇಡಿಯಂ ಪಿಚ್ ವೇಗ ಮತ್ತು ಹೆಚ್ಚುವರಿ ಬೌನ್ಸ್‌ಗೆ ಹೆಸರುವಾಸಿಯಾಗಿದೆ. ಇಲ್ಲಿ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ದೊರೆಯುತ್ತಿದ್ದು, ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 160ರಿಂದ 175 ರನ್‌ಗಳ ನಡುವೆಯೇ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತೀಯ ತಂಡದ ದೃಷ್ಟಿಯಲ್ಲಿ ಈ ಪಂದ್ಯ ವಿಶೇಷ ಮಹತ್ವ ಹೊಂದಿದೆ. ಟಿ20 ವಿಶ್ವಕಪ್‌ಗೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರಬೇಕಾದ ಒತ್ತಡದಲ್ಲಿದ್ದಾರೆ. ಕಳೆದ ವರ್ಷ 21 ಟಿ20 ಪಂದ್ಯಗಳಲ್ಲಿ ಕೇವಲ 218 ರನ್‌ಗಳನ್ನು ಗಳಿಸಿರುವ ಸೂರ್ಯಕುಮಾರ್, 13.62ರ ಸರಾಸರಿಯಲ್ಲಿ ಒಂದೇ ಒಂದು ಅರ್ಧಶತಕವನ್ನೂ ದಾಖಲಿಸಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಸೂರ್ಯ, ಈ ಸರಣಿಯಲ್ಲಿ ತನ್ನ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ನಂಬಿಕೆ ಮೂಡಿಸಬೇಕಿದೆ.
ಇನ್ನು, ಗಾಯದಿಂದ ಬಳಲುತ್ತಿದ್ದ ತಿಲಕ್ ವರ್ಮಾ ಮೊದಲ ಎರಡು ಪಂದ್ಯಗಳಿಂದ ಹೊರಬಿದ್ದಿರುವ ಕಾರಣ, ಅವರ ಸ್ಥಾನದಲ್ಲಿ ಇಶಾನ್ ಕಿಶನ್‌ಗೆ ಅವಕಾಶ ದೊರೆತಿದೆ. ಜೊತೆಗೆ, ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಮತ್ತೆ ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದೆ. ರಿಂಕು ತಮ್ಮ ಫಿನಿಷರ್ ಪಾತ್ರದಲ್ಲಿ ಮತ್ತೊಮ್ಮೆ ಮಿಂಚುವ ನಿರೀಕ್ಷೆ ಇದೆ.
ಬೌಲಿಂಗ್ ವಿಭಾಗದಲ್ಲಿಯೂ ಟೀಮ್ ಇಂಡಿಯಾ ಶಕ್ತಿಶಾಲಿಯಾಗಿ ಕಾಣಿಸಿಕೊಂಡಿದೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿಶೇಷವಾಗಿ ಬುಮ್ರಾ ಅವರ ಅನುಭವ ಮತ್ತು ಡೆತ್ ಓವರ್‌ಗಳ ನಿಯಂತ್ರಣ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗಲಿದೆ.
ಟಿ20 ವಿಶ್ವಕಪ್ 2024ರಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆ ಬಳಿಕ ಟೀಮ್ ಇಂಡಿಯಾ ಒಟ್ಟು 36 ಟಿ20 ಪಂದ್ಯಗಳನ್ನು ಆಡಿದೆ. ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿರುವ ಭಾರತ, ವಿಶ್ವಕಪ್ ನಂತರದ ಸರಣಿಗಳಲ್ಲೂ ಮೇಲುಗೈ ಸಾಧಿಸಿದೆ. 2026ರ ವಿಶ್ವಕಪ್‌ಗೂ ಮುನ್ನ ಈ ಅಜೇಯ ದಾಖಲೆ ಕಾಯ್ದುಕೊಳ್ಳುವುದು ಭಾರತದ ಪ್ರಮುಖ ಗುರಿಯಾಗಿದೆ.
ನ್ಯೂಜಿಲೆಂಡ್ ತಂಡವೂ ಸಮತೋಲನದ ತಂಡದೊಂದಿಗೆ ಕಣಕ್ಕಿಳಿದಿದೆ. ಡೆವೊನ್ ಕಾನ್ವೇ, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಬ್ಯಾಟಿಂಗ್‌ನ ಪ್ರಮುಖ ಅಸ್ತ್ರಗಳಾಗಿದ್ದರೆ, ಕೈಲ್ ಜೇಮಿಸನ್, ಇಶ್ ಸೋಧಿ ಮತ್ತು ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ನಾಯಕ ಮಿಚೆಲ್ ಸ್ಯಾಂಟ್ನರ್ ಆಲ್‌ರೌಂಡರ್ ಪಾತ್ರದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ.





