ಲಂಡನ್, ಆಗಸ್ಟ್ 04, 2025: ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. 2-2 ರಿಂದ ಸರಣಿಯನ್ನು ಸಮಬಲಗೊಳಿಸಿತ್ತು. ಈ ಗೆಲುವಿನೊಂದಿಗೆ ಭಾರತವು ಆಂಡರ್ಸನ್-ಟೆಂಡೂಲ್ಕರ್ ಟ್ರೋಫಿಯನ್ನು ಉಳಿಸಿಕೊಂಡಿತ್ತು. ಮೊಹಮ್ಮದ್ ಸಿರಾಜ್‌ರವರ ಐದು ವಿಕೆಟ್‌ಗಳ ಭರ್ಜರಿ ಪ್ರದರ್ಶನ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣರ ನಾಲ್ಕು ವಿಕೆಟ್‌ಗಳು ಭಾರತದ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ತಂಡವು ಇಂಗ್ಲೆಂಡ್‌ಗೆ 374 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್‌ಗೆ 339 ರನ್ ಗಳಿಸಿ, ಗೆಲುವಿಗೆ ಕೇವಲ 35 ರನ್‌ಗಳ ದೂರದಲ್ಲಿತ್ತು. ಆದರೆ ಅಂತಿಮ ದಿನದಾಟದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ತೋರಿದರು. ಮೊಹಮ್ಮದ್ ಸಿರಾಜ್ 5 ವಿಕೆಟ್ ಕಿತ್ತು ಪಂದ್ಯದ ಹೀರೋ ಎನಿಸಿಕೊಂಡರೆ, ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದು ಅವರಿಗೆ ಉತ್ತಮ ಸಾಥ್ ನೀಡಿದರು. ಇಂಗ್ಲೆಂಡ್ ತಂಡ 367 ರನ್‌ಗೆ ಆಲೌಟ್ ಆಗಿ, ಕೇವಲ 6 ರನ್ ಅಂತರದಿಂದ ಸೋಲು ಕಂಡಿತ್ತು.
ಪಂದ್ಯದ ಮೊದಲ ಓವರ್‌ನಿಂದಲೇ ಭಾರತದ ಬೌಲರ್‌ಗಳು ಒತ್ತಡ ಹೇರಿದರು. ಪ್ರಸಿದ್ಧ್ ಕೃಷ್ಣ ತಮ್ಮ ಎಸೆತದ ಮೊದಲ ಓವರ್‌ನಲ್ಲಿ ಜೇಮಿ ಓವರ್ಟನ್ ಬೌಂಡರಿ ಬಾರಿಸಿದಾಗ ಒಂದು ಕ್ಷಣ ಇಂಗ್ಲೆಂಡ್ ಗೆಲುವಿನ ಆಸೆಯನ್ನು ಚಿಗುರಿಸಿತ್ತು. ಆದರೆ ಮುಂದಿನ ಓವರ್‌ನಲ್ಲಿ ಸಿರಾಜ್, ಅಪಾಯಕಾರಿ ಬ್ಯಾಟ್ಸ್‌ಮನ್ ಸ್ಮಿತ್‌ನ ವಿಕೆಟ್ ಕಿತ್ತು ಭಾರತದ ಆತ್ಮವಿಶ್ವಾಸವನ್ನು ಮರಳಿ ತಂದರು. ಮುಂದಿನ ಓವರ್‌ನಲ್ಲಿ ಓವರ್ಟನ್ ಕೂಡ ಸಿರಾಜ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಜೋ ರೂಟ್ ಹೇಳಿದಂತೆ, “ಮೊಹಮ್ಮದ್ ಸಿರಾಜ್ ನೈಜ ಹೋರಾಟಗಾರ, ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ” ಎಂಬ ಮಾತು ಈ ಪಂದ್ಯದಲ್ಲಿ ಸಂಪೂರ್ಣವಾಗಿ ಸತ್ಯವಾಯಿತು.
ನಾಲ್ಕನೇ ದಿನದಾಟದಲ್ಲಿ ಸಿರಾಜ್ ಬ್ರೂಕ್‌ನ ಕ್ಯಾಚ್ ಕೈಚೆಲ್ಲಿದ್ದರಿಂದ ವಿಲನ್ ಎನಿಸಿಕೊಂಡಿದ್ದರು. ಆದರೆ ಅಂತಿಮ ದಿನದಾಟದಲ್ಲಿ ಅವರೇ ತಂಡದ ಹೀರೋ ಆದರು. ಇಂಗ್ಲೆಂಡ್‌ನ ಬ್ಯಾಟಿಂಗ್ ಲೈನ್‌ಅಪ್‌ನ್ನು ಒಡ್ಡಿದ ಒತ್ತಡದಿಂದ ಕುಸಿಯುವಂತೆ ಮಾಡಿದ ಸಿರಾಜ್, ತಮ್ಮ ವೇಗ ಮತ್ತು ನಿಖರತೆಯಿಂದ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಪ್ರಸಿದ್ಧ್ ಕೃಷ್ಣ ಕೂಡ ತಮ್ಮ ಶಿಸ್ತುಬದ್ಧ ಬೌಲಿಂಗ್‌ನಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕಷ್ಟವಾಗುವಂತೆ ಮಾಡಿದರು.
ಪಂದ್ಯದ ಕೊನೆಯ ಕ್ಷಣಗಳಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ತಮ್ಮ ಗಾಯಗೊಂಡ ಭುಜದೊಂದಿಗೆ ಒಂದೇ ಕೈಯಲ್ಲಿ ಬ್ಯಾಟಿಂಗ್‌ಗೆ ಇಳಿದು ತಂಡಕ್ಕಾಗಿ ಹೋರಾಡಿದರು. ಈ ದೃಶ್ಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಾಲ್ಕಮ್ ಮಾರ್ಷಲ್ ಒಂಟಿ ಕೈಯಲ್ಲಿ ಬ್ಯಾಟಿಂಗ್ ಮಾಡಿದ ಐತಿಹಾಸಿಕ ಕ್ಷಣವನ್ನು ನೆನಪಿಸಿತ್ತು. ಆದರೆ ಭಾರತದ ಬೌಲರ್‌ಗಳ ಆಕ್ರಮಣಕಾರಿ ಎಸೆತಗಳ ಮುಂದೆ ಇಂಗ್ಲೆಂಡ್ ಸೋಲು ಕಂಡಿದೆ.