ದುಬೈನ ರೋಚಕ ಕ್ರಿಕೆಟ್ ಕದನದಲ್ಲಿ ಭಾರತ ತಂಡವು ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಭಾವನಾತ್ಮಕ ಸಂಭ್ರಮವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವಾಗಲೂ ಗಂಭೀರವಾಗಿ ಕಾಣುವ ಗಂಭೀರ್, ಭಾರತ ಗೆಲುವಿನ ಗಡಿಯನ್ನು ದಾಟುತ್ತಿದ್ದಂತೆ ತಮ್ಮ ಮುಂದಿರುವ ಟೇಬಲ್‌ಗೆ ಜೋರಾಗಿ ಬಡಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ವಿಡಿಯೊ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತು.
ಪಂದ್ಯದ ಆರಂಭದಿಂದಲೂ ಒತ್ತಡದ ವಾತಾವರಣವಿತ್ತು. ಭಾರತ ಸಣ್ಣ ಮೊತ್ತವನ್ನು ಬೆನ್ನಟ್ಟುವಾಗ ಆರಂಭದಲ್ಲೇ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ಗೆಲುವು ಕಷ್ಟವೆನಿಸಿತು. ಪ್ರತಿ ಎಸೆತದ ಬಳಿಕ ಒತ್ತಡ ಹೆಚ್ಚಾಗುತ್ತಿತ್ತು. ಆದರೆ ತಿಲಕ್ ವರ್ಮ ಮತ್ತು ಶಿವಂ ದುಬೆ ಅವರ ಜವಾಬ್ದಾರಿಯುತ ಆಟ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯಿತು. ಭಾರತ 5 ವಿಕೆಟ್‌ಗೆ 150 ರನ್‌ಗಳನ್ನು ಗಳಿಸಿ ಏಷ್ಯಾಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ತಿಲಕ್ ವರ್ಮ ಅವರು 53 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳೊಂದಿಗೆ ಅಜೇಯ 69 ರನ್ ಗಳಿಸಿದರು. ಶಿವಂ ದುಬೆ ಇನ್ನೊಂದು ತುದಿಯಲ್ಲಿ 33 ರನ್‌ಗಳೊಂದಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿಯ ಆಟವು ಭಾರತಕ್ಕೆ ರೋಚಕ ಗೆಲುವನ್ನು ತಂದಿತ್ತು. ರಿಂಕು ಸಿಂಗ್ ವಿಜಯದ ರನ್ ಬಾರಿಸುತ್ತಿದ್ದಂತೆ, ಗಂಭೀರ್ ತಮ್ಮ ಭಾವನೆಗಳನ್ನು ತಡೆಯಲಾಗದೆ ಟೇಬಲ್‌ಗೆ ಬಡಿದು ಸಂಭ್ರಮಿಸಿದರು.
Very rare to see Gautam Gambhir like this pic.twitter.com/M7kVfpj61o
— Vipul (@vipuldhomane) September 28, 2025
ಗಂಭೀರ್ ಅವರ ಈ ಭಾವನಾತ್ಮಕ ಕ್ಷಣಕ್ಕೆ ಹಿನ್ನೆಲೆಯೂ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಗಂಭೀರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದರು ಮತ್ತು ದಾಳಿಗೆ ಕಾರಣರಾದವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧದ ಗೆಲುವು ಗಂಭೀರ್‌ಗೆ ವೈಯಕ್ತಿಕವಾಗಿಯೂ ವಿಶೇಷವಾಗಿತ್ತು. ಅವರ ಈ ಸಂಭ್ರಮವು ಕೇವಲ ಗೆಲುವಿನ ಆನಂದವಷ್ಟೇ ಅಲ್ಲ, ದೇಶಕ್ಕಾಗಿ ಒಂದು ದಿಟ್ಟ ಸಂದೇಶವೂ ಆಗಿತ್ತು.





