ಮದುವೆ ಎನ್ನುವುದು ಜೀವನದ ಸಮರಸ ಆರಂಭ, ಜೊತೆಗಾರನ ಆಯ್ಕೆಗೆ ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಹಿರಿಯರ ನಂಬಿಕೆಯಂತೆ, ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯಲ್ಲಿ ನಡೆಯುವ ಸಂಸ್ಕಾರ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಮದುವೆಯ ಮಹತ್ವ ಕೇವಲ ಆಡಂಬರಕ್ಕೆ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋಲುವವರು ಮದುವೆಯ ಸಾರವನ್ನೇ ಮರೆಯುತ್ತಿದ್ದಾರೆ. ಇದರ ಜೊತೆಗೆ, ಬಣ್ಣದ ಲೋಕದಲ್ಲಿ ಕೆಲವರು ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಚಿಕ್ಕ ವಿಷಯಗಳಿಗೆ ದಾಂಪತ್ಯವನ್ನು ಕೊನೆಗೊಳಿಸಿ, ಬೇರೆಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ಕೆಲವು ವರ್ಷಗಳಲ್ಲಿ, ಚಿತ್ರರಂಗ ಮತ್ತು ಕ್ರೀಡಾಲೋಕದ ಹಲವು ತಾರೆಯರು ತಮ್ಮ ದಾಂಪತ್ಯದಿಂದ ಮುಕ್ತರಾಗಿದ್ದಾರೆ. ಕೆಲವರು ಶಾಂತಿಯಿಂದ ತಮ್ಮ ದಾರಿಯಲ್ಲಿ ಮುಂದುವರಿದರೆ, ಇನ್ನೂ ಕೆಲವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಂಪತಿಯನ್ನು ಗುರುತಿಸಬಹುದು. ಈ ಜೋಡಿಯ ದಾಂಪತ್ಯ ಈಗ ಮುರಿದು ಬಿದ್ದಿದ್ದು, ಇಬ್ಬರೂ ತಮ್ಮ ತಮ್ಮ ದಾರಿಯಲ್ಲಿ ಸಾಗಿದ್ದಾರೆ. ಆದರೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಧನಶ್ರೀ ವರ್ಮಾ “ಅಮೆಜಾನ್”ನಲ್ಲಿ ಪ್ರಸಾರವಾಗುವ “ರೈಸ್ ಆಂಡ್ ಫಾಲ್” ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಚಹಾಲ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದ್ಯಾನಿಶ್ ಸೇರ್ ಅವರ ಸಹೋದರಿ ಕುಬ್ರಾ ಸೇರ್ ಜೊತೆಗಿನ ಸಂಭಾಷಣೆಯಲ್ಲಿ ಧನಶ್ರೀ, ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಇನ್ನೂ ಈ ಸಂಬಂಧ ಮುಂದುವರೆಯಲು ಸಾಧ್ಯ ಇಲ್ಲ, ನಾನು ತಪ್ಪು ಮಾಡಿದೆ ಎನ್ನುವ ವಿಚಾರ ನಿಮಗೆ ಗೊತ್ತಾಗಿದ್ದು ಯಾವಾಗ ಎಂದು ಧನಶ್ರೀಗೆ ಕುಬ್ರಾ ಕೇಳಿದ್ದಾರೆ. ಕುಬ್ರಾ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಧನಶ್ರೀ, “ಮೊದಲ ವರ್ಷದಲ್ಲಿಯೇ ಎಲ್ಲವೂ ಗೊತ್ತಾಯ್ತು. ಕೇವಲ ಎರಡು ತಿಂಗಳಲ್ಲಿ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಕೇಳಿ ಕುಬ್ರಾ ಆಘಾತಗೊಂಡಿದ್ದಾರೆ.
ಈ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಧನಶ್ರೀಯನ್ನು ಸಮರ್ಥಿಸಿದರೆ, ಇನ್ನೂ ಕೆಲವರು ಚಹಾಲ್‌ಗೆ ಮಾನಸಿಕ ಕಿರುಕುಳ ನೀಡಲು ಧನಶ್ರೀ ಈ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾದಿಸಿದ್ದಾರೆ. “ಇಬ್ಬರಲ್ಲಿ ಯಾರು ಯಾರಿಗೆ ಮೋಸ ಮಾಡಿದರು ಎನ್ನುವುದೇ ಗೊಂದಲವಾಗಿದೆ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಧನಶ್ರೀಯವರ ಈ ಹೇಳಿಕೆಗೆ ಯಜುವೇಂದ್ರ ಚಹಾಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. “ರೈಸ್ ಆಂಡ್ ಫಾಲ್” ಕಾರ್ಯಕ್ರಮದ ಮುಂದಿನ ಕಂತುಗಳಲ್ಲಿ ಧನಶ್ರೀ ಇನ್ನಷ್ಟು ಆರೋಪಗಳನ್ನು ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.





