ಬೆಂಗಳೂರು, ಏಪ್ರಿಲ್ 27: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವಿನ ಕೊನೆಯ ಲೀಗ್ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ಲೋಪ ಕಂಡುಬಂದಿದೆ. ಪಂದ್ಯಾವಳಿ ದಿನ ಕಿಡಿಗೇಡಿಗಳು ಸುಮಾರು 240 ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಪ್ರವೇಶ ದ್ವಾರಗಳ ಸಿಸಿಟಿವಿ, ಎನ್ವಿಆರ್ (NVR), ಫೈಬರ್ ಸಂಪರ್ಕಗಳು ಸೇರಿದಂತೆ ಪ್ರಮುಖ ಭದ್ರತಾ ವ್ಯವಸ್ಥೆಗಳನ್ನೇ ಕಡಿತಗೊಳಿಸಲಾಗಿದೆ.
ಹಿಂದೆಯೂ ಆಗಿತ್ತು ಕಾಲ್ತುಳಿತ ಪ್ರಕರಣ
ಕಳೆದ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಯನ್ನು ಸ್ಥಗಿತಗೊಳಿಸಬೇಕೆಂಬ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ಶತಪ್ರಯತ್ನ ಮಾಡಿ ಸರ್ಕಾರವನ್ನು ಒಪ್ಪಿಸಿತ್ತು. ಆದರೆ, ಈ ಬೆನ್ನಲ್ಲೇ ಭದ್ರತಾ ಲೋಪದ ಪ್ರಕರಣ ಮರುಕಳಿಸಿರುವುದು ಆತಂಕ ಮೂಡಿಸಿದೆ.
ಯಾರೀ ಆರೋಪಿಗಳು? ಹೇಗೆ ನಡೆಯಿತು ಈ ಕೃತ್ಯ?
ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ (IVS Digital Solutions) ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಇ ಮತ್ತು ಅಬ್ದುಲ್ ಕಲಾಂ ಎಂಬ ಇಬ್ಬರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರಿಗೆ ಯಾವುದೇ ಅಧಿಕೃತ ಐಪಿಎಲ್ ಪಾಸ್ ಇರಲಿಲ್ಲ. ನಿಷ್ಕ್ರಿಯಗೊಂಡ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣ ಪ್ರವೇಶಿಸಿದ ಇವರು, ನಂತರ ಸಿಸಿಟಿವಿ ಸರ್ವರ್ ರೂಮ್ ಪ್ರವೇಶಿಸಿ ಎನ್ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಇವರ ಕೃತ್ಯದಿಂದಾಗಿ ಕೆಳಗಿನ ಪ್ರದೇಶಗಳಲ್ಲಿ ಸಿಸಿಟಿವಿ ವ್ಯವಸ್ಥೆ ಸಂಪೂರ್ಣ ಕುಸಿಯಿತು.
-
ಎಲ್ಲಾ ಪ್ರವೇಶ ದ್ವಾರಗಳು
-
ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು
-
ಡಿ ಕಾರ್ಪೊರೇಟ್ ಸ್ಟ್ಯಾಂಡ್
-
ಎಲ್ಲಾ ಕನ್ಕೋರ್ಸ್ ಪ್ರದೇಶಗಳು
ಪೊಲೀಸರ ಕಾರ್ಯಾಚರಣೆ
ಆರೋಪಿಗಳ ಕೃತ್ಯದಿಂದಾಗಿ ಭದ್ರತಾ ಸಿಬ್ಬಂದಿಗೆ ಪಂದ್ಯದ ಮೇಲ್ವಿಚಾರಣೆಯಲ್ಲಿ ತೊಡಕುಂಟಾಯಿತು. ಆದರೂ, ಪೊಲೀಸರು ತಕ್ಷಣ ಅಲರ್ಟ್ ಆಗಿ ಬದಲಿ ವ್ಯವಸ್ಥೆ ಕಲ್ಪಿಸಿದ್ದರು. ವಿಷಯ ತಿಳಿದ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಯಾವುದೇ ಅನಾಹುತ ಸಂಭವಿಸದಂತೆ ತಡೆದರು.
FIR ದಾಖಲು, ತನಿಖೆ ತೀವ್ರ
ಕೆಎಸ್ಸಿಎ ಆಡಳಿತ ಮಂಡಳಿಯ ಆದಿತ್ಯ ಭಟ್ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪಂದ್ಯ ನಡೆಯುವ ದಿನ ಬೆಳಗ್ಗೆ ಪರಿಶೀಲಿಸಿದಾಗ ಸಿಸಿಟಿವಿಗಳು ಆಫ್ ಆಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಅವರಿಬ್ಬರೂ ಐವಿಎಸ್ ಡಿಜಿಟಲ್ ಸಂಸ್ಥೆಯಲ್ಲಿ ದೀರ್ಘಕಾಲ ಕೆಲಸ ಮಾಡಿದವರಾಗಿದ್ದಾರೆ. ಸಂಸ್ಥೆಯೊಂದಿಗಿನ ಆಂತರಿಕ ಜಗಳದಿಂದಾಗಿ ಈ ದುಷ್ಕೃತ್ಯ ಎಸಗಿರುವ ಶಂಕೆ ಇದೆ. ಪೊಲೀಸರು ಐವಿಎಸ್ ಸಂಸ್ಥೆಗೂ ನೋಟಿಸ್ ಜಾರಿ ಮಾಡಲಿದ್ದಾರೆ.
