ದುಬೈಯಲ್ಲಿ ನಡೆದ ಏಷ್ಯಾ ಕಪ್ 2025 ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಭಾರತ ಒಂಬತ್ತನೇ ಬಾರಿ ಚಾಂಪಿಯನ್ ಆಗಿದೆ. ಆದರೆ, ಈ ಐತಿಹಾಸಿಕ ಗೆಲುವಿನ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭವು ಪಂದ್ಯಕ್ಕಿಂತಲೂ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ದ ಅಧ್ಯಕ್ಷ ಮೋಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿದ್ದು, ಟ್ರೋಫಿ ಇಲ್ಲದೆ ಸಂಭ್ರಮಿಸಿದೆ.
ಪಂದ್ಯ ಮುಗಿದ ನಂತರ ಸಾಮಾನ್ಯವಾಗಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭವು ಸುಮಾರು 55 ನಿಮಿಷಗಳ ಕಾಲ ವಿಳಂಬವಾಯಿತು. ವೇದಿಕೆಯ ಮೇಲೆ ನಖ್ವಿ ಸೇರಿದಂತೆ ಹಲವು ಗಣ್ಯರು ಕಾಯುತ್ತಿದ್ದರು. ಭಾರತೀಯ ಆಟಗಾರರು ವೇದಿಕೆಯಿಂದ 15-20 ಅಡಿ ದೂರದಲ್ಲಿ ನಿಂತು ಪ್ರತಿರೋಧವನ್ನು ವ್ಯಕ್ತಪಡಿಸಿದರು. ಇದರಿಂದಾಗಿ ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಯಿತು. ನಿರೂಪಕ ಸೈಮನ್ ಡೂಲ್ ಅವರು “ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ” ಎಂದು ತಿಳಿಸಿ ಸಮಾರಂಭವನ್ನು ಕೊನೆಗೊಳಿಸಿದರು. ಇದರಿಂದಾಗಿ ಭಾರತೀಯ ಆಟಗಾರರು ಅಣಕು ಟ್ರೋಫಿ ಎತ್ತಿ ಹಿಡಿದಂತೆ ಸಂಭ್ರಮಿಸಿದರು, ಆದರೆ ನಿಜವಾದ ಟ್ರೋಫಿಯನ್ನು ಸ್ವೀಕರಿಸಲಿಲ್ಲ.
ಈ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘ ಅವರು ಉದ್ಧಟತನ ತೋರಿದರು ಎಂದು ವರದಿಯಾಗಿದೆ. ರನ್ನರ್-ಅಪ್ ಬಹುಮಾನವನ್ನು ಸ್ವೀಕರಿಸಲು ಪಾಕಿಸ್ತಾನ ಆಟಗಾರರನ್ನು ವೇದಿಕೆಗೆ ಕರೆಯಲಾಯಿತು. ಆದರೆ ಅವರು ಒಲ್ಲದ ಮನಸಿನಿಂದ ಬಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥರಿಂದ ಬಹುಮಾನವನ್ನು ಪಡೆದರು. ಕೊನೆಯಲ್ಲಿ ಅಘ ಅವರು ಚೆಕ್ ಸ್ವೀಕರಿಸಿ ಅದನ್ನು ವೇದಿಕೆಯ ಮೇಲೆಯೇ ಬಿಸಾಡಿದರು, ಇದು ಇನ್ನಷ್ಟು ವಿವಾದಕ್ಕೆ ಕಾರಣವಾಯಿತು.





