2025ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಂ ಇಂಡಿಯಾ, ಇಂದಿಗೂ ಆ ಜಯದ ಟ್ರೋಫಿಯನ್ನು ಕೈಗೆತ್ತಿಕೊಳ್ಳುವ ಭಾಗ್ಯವನ್ನೇ ಕಾಣದೆ ಕಂಗಾಲಾಗಿದೆ.
ಟೂರ್ನಿಯ ಬಳಿಕ ಟ್ರೋಫಿ ಹಸ್ತಾಂತರದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಈ ನಿರ್ಧಾರದಿಂದ ಮುಜುಗರಕ್ಕೊಳಗಾದ ನಖ್ವಿ, ಟ್ರೋಫಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದರು. ನಂತರ ಅದನ್ನು ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹೊಸ ತಿರುವು ಸಿಕ್ಕಿದೆ. ಆ ಟ್ರೋಫಿ ಎಸಿಸಿ ಪ್ರಧಾನ ಕಚೇರಿಯಿಂದಲೂ ಕಣ್ಮರೆಯಾಗಿದೆ ಎಂಬ ವರದಿ ಹೊರಬಿದ್ದಿದೆ.
ಮೊಹ್ಸಿನ್ ನಖ್ವಿ, ಟ್ರೋಫಿಯನ್ನು ಎಸಿಸಿ ಕಚೇರಿಗೆ ಹಸ್ತಾಂತರಿಸಿದಾಗ, “ನನ್ನ ಅನುಮತಿಯಿಲ್ಲದೆ ಈ ಟ್ರೋಫಿಯನ್ನು ಯಾರೂ ಸ್ಥಳಾಂತರಿಸಬಾರದು ಅಥವಾ ಯಾರಿಗೂ ಕೊಡಬಾರದು” ಎಂಬ ಷರತ್ತು ಹಾಕಿದ್ದರು. ಈ ನಾಟಕದಿಂದ ಬಿಸಿಸಿಐ ಕೋಪಗೊಂಡಿತ್ತು. ನಖ್ವಿ, ಮಾಧ್ಯಮಗಳಿಗೆ ಹೇಳಿಕೆಯಲ್ಲಿ “ಟ್ರೋಫಿ ಹಸ್ತಾಂತರ ಸಮಾರಂಭವನ್ನು ಮತ್ತೊಮ್ಮೆ ಆಯೋಜಿಸುತ್ತೇವೆ. ಟೀಂ ಇಂಡಿಯಾ ಹಾಗೂ ಬಿಸಿಸಿಐ ಅಧಿಕಾರಿಗಳು ಬಂದು ನನ್ನ ಕೈಯಿಂದ ಟ್ರೋಫಿ ಸ್ವೀಕರಿಸಲಿ” ಎಂದು ಹೇಳಿದ್ದರು. ಆದರೆ ಬಿಸಿಸಿಐ ಈ ಸಲಹೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು.
ಇತ್ತೀಚೆಗೆ ಬಿಸಿಸಿಐ ಅಧಿಕಾರಿಯೊಬ್ಬರು ದುಬೈನ ಎಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಟ್ರೋಫಿ ಬಗ್ಗೆ ವಿಚಾರಿಸಿದಾಗ, ಅಲ್ಲಿನ ಅಧಿಕಾರಿಗಳು “ಟ್ರೋಫಿಯನ್ನು ಇಲ್ಲಿ ಇನ್ನು ಇರಿಸಲಾಗಿಲ್ಲ. ನಖ್ವಿ ಅವರ ಆದೇಶದ ಮೇರೆಗೆ ಅದನ್ನು ಅಬುಧಾಬಿಯಲ್ಲಿರುವ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಟ್ರೋಫಿ ನಿಜವಾಗಿಯೂ ಎಲ್ಲಿ ಇದೆ ಎಂಬುದರ ಬಗ್ಗೆ ಈಗ ಯಾರಿಗೂ ಖಚಿತ ಮಾಹಿತಿ ಇಲ್ಲ.
ಮೊಹ್ಸಿನ್ ನಖ್ವಿಯ ನಾಟಕಗಳಿಂದ ಕೋಪಗೊಂಡಿರುವ ಬಿಸಿಸಿಐ, ಮುಂದಿನ ದಿನಗಳಲ್ಲಿ ತೀವ್ರ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ವರದಿಗಳ ಪ್ರಕಾರ, ಬಿಸಿಸಿಐ ಈಗಾಗಲೇ ಎಸಿಸಿ ಸದಸ್ಯ ಮಂಡಳಿಗಳ ಬೆಂಬಲವನ್ನು ಕೋರಿದೆ. ನಖ್ವಿಯನ್ನು ಎಸಿಸಿ ಅಧ್ಯಕ್ಷ ಸ್ಥಾನದಿಂದ ಹಾಗೂ ಐಸಿಸಿ ಸದಸ್ಯ ಸ್ಥಾನದಿಂದ ತೆಗೆದುಹಾಕಲು ಯತ್ನಿಸುತ್ತಿದೆ.
ಅದರ ಜೊತೆಗೆ, ನಖ್ವಿಯ ವಿರುದ್ಧ ಐಸಿಸಿಗೆ ಅಧಿಕೃತ ದೂರು ಸಲ್ಲಿಸಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಕ್ರಿಕೆಟ್ ಆಡಳಿತದ ಗೌರವಕ್ಕೆ ಧಕ್ಕೆಯಾಗುವ ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.





