ಏಷ್ಯಾಕಪ್ 2025 ರ ರೋಚಕ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾದವು. ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಈವರೆಗೆ 21 ಬಾರಿ ಎದುರಾದವು. ಇದರಲ್ಲಿ ಭಾರತ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಪಾಕಿಸ್ತಾನ ಕೇವಲ 6 ಪಂದ್ಯಗಳಲ್ಲಿ ಜಯ ಗಳಿಸಿದೆ. ಮೂರು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದ್ದವು. ಈ ಬಾರಿಯ 14ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿತು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಟಾಸ್ ಮತ್ತು ಪಾಕಿಸ್ತಾನದ ಬ್ಯಾಟಿಂಗ್
ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಸಾಹಿಬ್‌ಝಾದ ಫರ್ಹಾನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 45 ಎಸೆತಗಳಲ್ಲಿ 3 ಸಿಕ್ಸ್ ಮತ್ತು 5 ಫೋರ್‌ಗಳೊಂದಿಗೆ 58 ರನ್ ಗಳಿಸಿದ ಫರ್ಹಾನ್, ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಸೈಮ್ ಅಯೂಬ್ 21 ರನ್ ಗಳಿಸಿದರೆ, ಕೊನೆಯ ಓವರ್‌ಗಳಲ್ಲಿ ಫಹೀಮ್ ಅಶ್ರಫ್ 20 ರನ್‌ಗಳ ಕೊಡುಗೆ ನೀಡಿದರು. ಇದರಿಂದಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿತು.
ಭಾರತದ ಸ್ಫೋಟಕ ಆರಂಭ
172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸ್ಫೋಟಕ ಆಟವಾಡಿದರು. ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ಅಭಿಷೇಕ್, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಎದುರಾಳಿಗಳಿಗೆ ಒತ್ತಡ ಹೇರಿದರು. ಶುಭ್‌ಮನ್ ಗಿಲ್ ಕೂಡ 28 ಎಸೆತಗಳಲ್ಲಿ 47 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ಜೋಡಿಯ ಆಕರ್ಷಕ ಬ್ಯಾಟಿಂಗ್‌ನಿಂದ ಭಾರತ ಕೇವಲ 10 ಓವರ್‌ಗಳಲ್ಲಿ 109 ರನ್ ಕಲೆಹಾಕಿತು.
ಮಧ್ಯಮ ಕ್ರಮಾಂಕದ ಸವಾಲು
ಗಿಲ್ (47) ಔಟಾದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಅಭಿಷೇಕ್ ಶರ್ಮಾ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರೆಸಿದರು. 39 ಎಸೆತಗಳಲ್ಲಿ 5 ಸಿಕ್ಸ್ ಮತ್ತು 6 ಫೋರ್‌ಗಳೊಂದಿಗೆ 74 ರನ್ ಗಳಿಸಿ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದರು. ಆದರೆ, ದೊಡ್ಡ ಹೊಡೆತಕ್ಕೆ ಯತ್ನಿಸುವಾಗ ಅವರು ಕ್ಯಾಚ್ ನೀಡಿ ಔಟಾದರು. ಸಂಜು ಸ್ಯಾಮ್ಸನ್ 13 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ತಿಲಕ್ ಮತ್ತು ಪಾಂಡ್ಯರ ಫಿನಿಶಿಂಗ್ ಟಚ್
ಕೊನೆಯ ಹಂತದಲ್ಲಿ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಟದ ಮೂಲಕ ಭಾರತವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. 18.5 ಓವರ್‌ಗಳಲ್ಲಿ ಭಾರತ ಗುರಿಯನ್ನು ತಲುಪಿತು. ಇದರೊಂದಿಗೆ 6 ವಿಕೆಟ್‌ಗಳ ಭರ್ಜರಿ ಜಯವನ್ನು ದಾಖಲಿಸಿತು. ಈ ಗೆಲುವು ಭಾರತದ ಆಕರ್ಷಕ ಆಟ ಮತ್ತು ತಂಡದ ಸಾಮರ್ಥ್ಯವನ್ನು ಎತ್ತಿ ತೋರಿಸಿತು.
ತಂಡಗಳ ವಿವರ
ಭಾರತದ ಪ್ಲೇಯಿಂಗ್ ಇಲೆವೆನ್ ;ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನದ ಪ್ಲೇಯಿಂಗ್ ಇಲೆವೆನ್: ಸಾಹಿಬ್‌ಝಾದ ಫರ್ಹಾನ್, ಸೈಮ್ ಅಯೂಬ್, ಫಖರ್ ಝಮಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಹುಸೈನ್ ತಲಾತ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್.