ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳು ಯಾವಾಗಲೂ ವಿಶ್ವದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿವೆ. ಈ ಪಂದ್ಯವನ್ನು ನೋಡಲು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಟ್ರೋಫಿ ಗೆಲ್ಲುವುದು ದ್ವಿತೀಯಕ, ಆದರೆ ಈ ಮ್ಯಾಚ್‌ನಲ್ಲಿ ಗೆಲ್ಲುವುದು ಮುಖ್ಯ. ಆದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಟಿಕೆಟ್‌ಗಳಿಗೆ ಯಾವುದೇ ಡಿಮ್ಯಾಂಡ್ ಇಲ್ಲ! ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗುತ್ತಿದ್ದ ಟಿಕೆಟ್‌ಗಳು ಇನ್ನೂ ಲಭ್ಯವಿವೆ. ಇದೇ ದುಬೈಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಟಿಕೆಟ್‌ಗಳು ಕೇವಲ 15 ನಿಮಿಷಗಳಲ್ಲಿ ಮಾರಾಟವಾಗಿದ್ದವು. ಆದರೆ ಈಗ ಏಷ್ಯಾಕಪ್ ಟಿಕೆಟ್‌ಗಳು ಹಾಗೇಯೇ ಉಳಿದಿವೆ. ಈ ಡಿಮ್ಯಾಂಡ್ ಕಡಿಮೆಯಾಗಲು ನಾಲ್ಕು ಪ್ರಮುಖ ಕಾರಣಗಳಿವೆ.
ಟಿಕೆಟ್ ಬೆಲೆಯ ಭಾರೀ ಏರಿಕೆ
ಏಷ್ಯಾಕಪ್ ಆಯೋಜಕರು ಟಿಕೆಟ್ ಬೆಲೆಯನ್ನು ದುಪ್ಪಟ್ಟು ಮಾಡಿದ್ದಾರೆ. ಅನ್ಲಿಮಿಟೆಡ್ ಆಹಾರ, ಪಾನೀಯಗಳು, ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಸ್ಟ್ಯಾಂಡ್‌ನ ಎರಡು ಟಿಕೆಟ್‌ಗಳ ಬೆಲೆಯನ್ನು 2.57 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ರಾಯಲ್ ಬಾಕ್ಸ್‌ನ ಟಿಕೆಟ್ 2.30 ಲಕ್ಷ, ಸ್ಕೈ ಬಾಕ್ಸ್ ಈಸ್ಟ್ ಸ್ಟ್ಯಾಂಡ್‌ನ ಒಂದು ಟಿಕೆಟ್ 1.67 ಲಕ್ಷ, ಪ್ಲಾಟಿನಮ್ ಟಿಕೆಟ್ 75 ಸಾವಿರ, ಗ್ರ್ಯಾಂಡ್ ಲಾಂಜ್ 41 ಸಾವಿರ ಮತ್ತು ಪೆವಿಲಿಯನ್ ವೆಸ್ಟ್ನ ಟಿಕೆಟ್ 28 ಸಾವಿರ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಈ ದುಪ್ಪಟ್ಟು ಬೆಲೆಯು ಸಾಮಾನ್ಯ ಅಭಿಮಾನಿಗಳಿಗೆ ತಲೆಯ ಮೇಲೆ ಬಿದ್ದಂತಿದೆ.
ಸ್ಟಾರ್ ಆಟಗಾರರ ಅನುಪಸ್ಥಿತಿ
ಇಂಡೋ-ಪಾಕ್ ಪಂದ್ಯಗಳ ಕ್ರೇಜ್‌ಗೆ ಮುಖ್ಯ ಕಾರಣ ಸ್ಟಾರ್ಗಳು. ಕಿಂಗ್ ವಿರಾಟ್ ಕೊಹ್ಲಿ ಮತ್ತು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅಂತಹ ಆಟಗಾರರು ಕಣದಲ್ಲಿದ್ದರೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಾರೆ. ಆದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಇಬ್ಬರೂ ಆಡುತ್ತಿಲ್ಲ. ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ರೋಹಿತ್ ಅವರ ಆರಂಭಿಕ ಹೊಡೆತಗಳು ಪಂದ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಅಭಿಮಾನಿಗಳು ಸ್ಟೇಡಿಯಂಗೆ ಬರುವುದೇ ಈ ಸ್ಟಾರ್ಗಳನ್ನು ನೇರವಾಗಿ ನೋಡುವುದಕ್ಕಾಗಿ. ಸ್ಟಾರ್ಗಳು ಇಲ್ಲದಿದ್ದರೆ ಪಂದ್ಯದ ರೋಮಾಂಚಕ ಕಡಿಮೆಯಾಗುತ್ತದೆ. ಇದರ ಜೊತೆಗೆ ಹೆಚ್ಚಿನ ಬೆಲೆಯು ಅಭಿಮಾನಿಗಳನ್ನು ಹಿಂದೆ ಸರಿಸಿದೆ.
ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ
ಇಂಡೋ-ಪಾಕ್ ಪಂದ್ಯಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿ. ಆದರೆ ಕಳೆದ ವರ್ಷದ ಏಷ್ಯಾಕಪ್ ಮತ್ತು ವಿಶ್ವಕಪ್‌ಗಳಲ್ಲಿ ಎಲ್ಲಾ ಮುಖಾಮುಖಿಗಳು ಒನ್ಸೈಡೆಡ್ ಆಗಿವೆ. ಭಾರತ ತಂಡದ ಅದ್ಭುತ ಪ್ರದರ್ಶನಕ್ಕೆ ಪಾಕಿಸ್ತಾನ ಕನಿಷ್ಟ ಹೋರಾಟವನ್ನೂ ನಡೆಸದೆ ಸೋತಿದೆ. ಬಾಬರ್ ಅಝಂ ಮತ್ತು ಮೊಹಮ್ಮದ್ ರಿಜ್ವಾನ್ರಂತಹ ಸ್ಟಾರ್‌ಗಳು ಈ ಬಾರಿ ತಂಡದಲ್ಲಿ ಇಲ್ಲದಿರುವುದು ಮತ್ತಷ್ಟು ಎಕ್ಸೈಟ್ಮೆಂಟ್ ಕಡಿಮೆ ಮಾಡಿದೆ. ಪಾಕಿಸ್ತಾನದ ದುರ್ಬಲ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ಅಪ್ ಅಭಿಮಾನಿಗಳಲ್ಲಿ ನಿರೀಕ್ಷೆ ಕಡಿಮೆ ಮಾಡಿದೆ. ಯಾವುದೇ ಪಂದ್ಯದಲ್ಲಿ ಸಮಬಲದ ಹೋರಾಟವಿಲ್ಲದಿದ್ದರೆ ಅದರ ಆಕರ್ಷಣೆ ಕಡಿಮೆಯಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ವಿರೋಧ
ಪುಲ್ವಾಮಾ ಉಗ್ರರ ದಾಳಿಯ ಭೀಕರತೆ ಇನ್ನೂ ಭಾರತೀಯರ ಮನದಲ್ಲಿ ತಾಜಾವಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಾಯ್ಕಾಟ್ ಮಾಡುವ ಕ್ಯಾಂಪೇನ್ಗಳು ನಡೆಯುತ್ತಿವೆ. ಅಭಿಮಾನಿಗಳು ರಾಜಕೀಯ ಮತ್ತು ಭದ್ರತಾ ಕಾರಣಗಳಿಂದ ಪಂದ್ಯವನ್ನು ವಿರೋಧಿಸುತ್ತಿದ್ದಾರೆ. ಈ ವಿರೋಧದ ಪರಿಣಾಮ ಟಿಕೆಟ್ ಮಾರಾಟದ ಮೇಲೆ ಬಿದ್ದಿದೆ. ಹಲವರು ಟಿವಿಯಲ್ಲಿ ನೋಡುವುದನ್ನು ಬಿಟ್ಟು ಸ್ಟೇಡಿಯಂಗೆ ಬರಲು ಹಿಂಜರಿಯುತ್ತಿದ್ದಾರೆ.
ಈ ನಾಲ್ಕು ಕಾರಣಗಳಿಂದ ಇಂಡೋ-ಪಾಕ್ ಪಂದ್ಯದ ಟಿಕೆಟ್‌ಗಳು ಮಾರಾಟವಾಗದೇ ಉಳಿದಿವೆ. ಸೂಪರ್ ಸಂಡೇಯ ಲೀಗ್ ಮ್ಯಾಚ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದರೆ ಮಾತ್ರ ಸೂಪರ್ 4 ಹಂತದಲ್ಲಿ ಕ್ರೇಜ್ ಹೆಚ್ಚಬಹುದು. ಇಲ್ಲದಿದ್ದರೆ ಈ ಐತಿಹಾಸಿಕ ಕಾಳಗದ ಫೀವರ್ ಮತ್ತಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಕ್ರಿಕೆಟ್ ಅಭಿಮಾನಿಗಳು ಈ ಬದಲಾವಣೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕು.