ಮುಂಬಯಿ: ಭಾರತ ಕ್ರಿಕೆಟ್ ಇತಿಹಾಸದ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರ ಹಾಗೂ ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಮುಂದಾಗಿದ್ದಾರೆ. ಬಾಲ್ಯದ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ಹಸೆಮಣೆ ಏರಲಿದ್ದು, ಈ ಜೋಡಿಯ ವಿವಾಹ ದಿನಾಂಕವನ್ನು ಈಗ ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ.
ಲಭ್ಯವಿರುವ ಮಾಹಿತಿಯಂತೆ, ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಮಾರ್ಚ್ 5, 2026 ರಂದು ನಡೆಯಲಿದೆ. ಮದುವೆ ಸಂಭ್ರಮಗಳು ಮಾರ್ಚ್ 3 ರಿಂದಲೇ ಆರಂಭವಾಗಲಿದ್ದು, ಮುಂಬೈನಲ್ಲಿ ವಿವಿಧ ಸಾಂಪ್ರದಾಯಿಕ ಹಾಗೂ ಸಮಾರಂಭಗಳು ನಡೆಯಲಿವೆ. ವಿವಾಹ ಕಾರ್ಯಕ್ರಮಕ್ಕೆ ಕೇವಲ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಕೆಲವೇ ಆಯ್ದ ಅತಿಥಿಗಳಿಗೆ ಆಹ್ವಾನ ನೀಡಲಾಗಿದ್ದು, ಖಾಸಗಿ ರೀತಿಯಲ್ಲಿ ಮದುವೆ ನಡೆಸಲು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ವರ್ಗಾವಣೆ ವೇಳೆ, ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ಸೇರ್ಪಡೆಯಾದರು. ವೃತ್ತಿಜೀವನದಲ್ಲಿ ಹೊಸ ಅವಕಾಶವನ್ನು ಸ್ವೀಕರಿಸಿದ ಅರ್ಜುನ್, ಇದೀಗ ವೈಯಕ್ತಿಕ ಜೀವನದಲ್ಲಿಯೂ ಮಹತ್ವದ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ವಧು ಸಾನಿಯಾ ಚಾಂದೋಕ್ ಅವರು ಖ್ಯಾತ ಉದ್ಯಮ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ತಾತ ರವಿ ಘಾಯ್ ಅವರು ದೇಶದ ಪ್ರಮುಖ ಉದ್ಯಮ ಸಂಸ್ಥೆಯಾದ ಗ್ರಾವಿಸ್ ಗ್ರೂಪ್ನ ಮುಖ್ಯಸ್ಥರಾಗಿದ್ದಾರೆ. ಈ ಗ್ರೂಪ್, ದಿ ಬ್ರೂಕ್ಲಿನ್ ಕ್ರೀಮೆರಿ ಮತ್ತು ಬಾಸ್ಕಿನ್ ರಾಬಿನ್ಸ್ ಸೇರಿದಂತೆ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್‌ಗಳನ್ನು ಹೊಂದಿದೆ. ಸಾನಿಯಾ ಅವರು ಮುಂಬೈನಲ್ಲಿರುವ ಮಿಸ್ಟರ್ ಪಾಸ್ ಪೆಟ್ ಸ್ಪಾ & ಸ್ಟೋರ್ ಎಲ್ಎಲ್ಪಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮದೇ ಆದ ವೃತ್ತಿಪರ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.
ಅರ್ಜುನ್ ಮತ್ತು ಸಾನಿಯಾ ಅವರ ಪ್ರೀತಿಯ ಪಯಣ ಬಾಲ್ಯದಲ್ಲೇ ಆರಂಭವಾಗಿದ್ದು, ದೀರ್ಘಕಾಲದ ಸ್ನೇಹವೇ ನಂತರ ಪ್ರೀತಿಗೆ ತಿರುಗಿತ್ತು. ಈ ಜೋಡಿ ಆಗಸ್ಟ್ 2025ರಲ್ಲಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ವಿಷಯವನ್ನು ಕುಟುಂಬವು ಬಹಿರಂಗವಾಗಿ ಹೆಚ್ಚು ಪ್ರಚಾರ ಮಾಡಿರಲಿಲ್ಲ.
ಇದಕ್ಕೂ ಮೊದಲು, ಸಾಮಾಜಿಕ ಜಾಲತಾಣಗಳಲ್ಲಿ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆದ ಬಳಿಕ, ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ, ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ರೆಡ್ಡಿಟ್‌ನಲ್ಲಿ ನಡೆದ AMA (Ask Me Anything) ಸೆಷನ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವ ಮೂಲಕ ತಮ್ಮ ಮಗನ ನಿಶ್ಚಿತಾರ್ಥವನ್ನು ದೃಢಪಡಿಸಿದ್ದರು. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿತ್ತು.





