ಕೇರಳದ ಓಣಂ ಸಂಭ್ರಮಕ್ಕೆ ವಿಶೇಷ ಉಡುಗೊರೆಯಾಗಿ, ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟಿನಾ (Argentina) ರಾಷ್ಟ್ರೀಯ ತಂಡವು ಕೇರಳಕ್ಕೆ ಆಗಮಿಸಿ ಸೌಹಾರ್ದ ಪಂದ್ಯ ಆಡಲಿದೆ ಎಂದು ಅರ್ಜೆಂಟಿನಾ ಫುಟ್‌ಬಾಲ್ ಸಂಸ್ಥೆಯು ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ, ಮೆಸ್ಸಿ ತಂಡವು ಭಾರತದಲ್ಲಿ ಆಡುವ ಬಗ್ಗೆ ಇದ್ದ ಗೊಂದಲ ಮತ್ತು ಅನುಮಾನಗಳಿಗೆ ತೆರೆ ಬಿದ್ದಿದೆ. ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಕೂಡ ಮೆಸ್ಸಿಯ ಆಗಮನವನ್ನು ಖಚಿತಪಡಿಸಿದ್ದಾರೆ.
ಕೇರಳ ಸರ್ಕಾರವು ಮೆಸ್ಸಿಯ ಭೇಟಿಯನ್ನು ಖಚಿತಪಡಿಸಿದ್ದು, ಲಿಯೋನೆಲ್ ಸ್ಕಲೋನಿ ನೇತೃತ್ವದ ಅರ್ಜೆಂಟಿನಾ ತಂಡವು ಕೇರಳದ ಅಂಗೋಲಾ ಮತ್ತು ಲೋಂಡಾದಲ್ಲಿ ಸೌಹಾರ್ದ ಪಂದ್ಯಗಳನ್ನು ಆಡಲಿದೆ ಎಂದು ತಿಳಿಸಿದೆ. 2022ರ ವಿಶ್ವಕಪ್ ವಿಜೇತ ತಂಡದ ಆಟವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಫುಟ್‌ಬಾಲ್ ಪ್ರೇಮಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂದ್ಯವನ್ನು ಆಯೋಜಿಸುವ ಕುರಿತು ಕೇರಳ ಸರ್ಕಾರವು ಅರ್ಜೆಂಟಿನಾ ಫುಟ್‌ಬಾಲ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿತ್ತು. ಆರಂಭದಲ್ಲಿ ಅರ್ಜೆಂಟಿನಾ ತಂಡವು ಒಪ್ಪಿಗೆ ನೀಡಿದರೂ, ನಂತರ 2026ರಲ್ಲಿ ಭೇಟಿ ನೀಡುವುದಾಗಿ ತಿಳಿಸಿತ್ತು. ಇದರಿಂದ ಮೆಸ್ಸಿ ತಂಡವು ಕೇರಳಕ್ಕೆ ಆಗಮಿಸುವ ಬಗ್ಗೆ ಅನುಮಾನಗಳು ಹರಡಿದ್ದವು. ಆದರೆ, ಇದೀಗ ಕೇರಳ ಸರ್ಕಾರದ ಕೋರಿಕೆಯನ್ನು ಒಪ್ಪಿಕೊಂಡ ಅರ್ಜೆಂಟಿನಾ ತಂಡವು 2025ರಲ್ಲಿ ಭೇಟಿ ನೀಡುವುದನ್ನು ಖಚಿತಪಡಿಸಿದೆ.
ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಹೇಳಿಕೆಯಲ್ಲಿ, “2022ರ ವಿಶ್ವಕಪ್ ವಿಜೇತ ಅರ್ಜೆಂಟಿನಾ ತಂಡವನ್ನು ಕೇರಳದಲ್ಲಿ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಲಕ್ಷಾಂತರ ಫುಟ್‌ಬಾಲ್ ಪ್ರೇಮಿಗಳಿಗೆ ತಮ್ಮ ನೆಚ್ಚಿನ ತಂಡದ ಆಟವನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿವೆ” ಎಂದು ತಿಳಿಸಿದ್ದಾರೆ.
ಈ ಫಿಫಾ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟಿನಾ ತಂಡವು ಫಿಫಾ ಶ್ರೇಯಾಂಕದಲ್ಲಿ ಅಗ್ರ 50ರಲ್ಲಿ ಸ್ಥಾನ ಪಡೆದಿರುವ ತಂಡವೊಂದರ ವಿರುದ್ಧ ಸೆಣಸಾಟ ನಡೆಸಲಿದೆ. ಎದುರಾಳಿ ತಂಡವು ಇನ್ನೂ ಅಂತಿಮವಾಗಿಲ್ಲ.