ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಹಾಗೂ ಮಾಜಿ ಐಪಿಎಲ್ ಕ್ರಿಕೆಟಿಗ ಅಮನ್‌ಪ್ರೀತ್ ಸಿಂಗ್ ಗಿಲ್ ಹಠಾತ್ ನಿಧನರಾಗಿದ್ದಾರೆ. ಕೇವಲ 36 ವರ್ಷದ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದು ಕ್ರಿಕೆಟ್ ಅಭಿಮಾನಿಗಳು ಹಾಗೂ ಸಹ ಆಟಗಾರರಿಗೆ ಆಘಾತ ತಂದಿದೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಮೀಡಿಯಂ ಪೇಸ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್, ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಹಲವು ಮಹತ್ವದ ಪಂದ್ಯಗಳನ್ನು ಆಡಿದ್ದರು. ಕ್ರೀಡಾ ಜೀವನದ ಬಳಿಕ ಅವರು ಪಂಜಾಬ್ ಕ್ರಿಕೆಟ್‌ನ ಹಿರಿಯ ಆಯ್ಕೆಗಾರರ ಸಮಿತಿಯ ಸದಸ್ಯರಾಗಿ ಸಹ ಸೇವೆ ಸಲ್ಲಿಸುತ್ತಿದ್ದರು.
ಅಮನ್‌ಪ್ರೀತ್ ಸಿಂಗ್ ಗಿಲ್ ಅವರು ವಿರಾಟ್ ಕೊಹ್ಲಿ ನಾಯಕತ್ವದ ಅಂಡರ್-19 ತಂಡದಲ್ಲಿಯೂ ಭಾಗವಾಗಿದ್ದರು. ಆ ಸಮಯದಲ್ಲಿ ಅವರ ಆಟ ಮತ್ತು ಶ್ರಮ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರು ಐಪಿಎಲ್‌ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸಹ ಪ್ರತಿನಿಧಿಸಿದ್ದರು.
ಅವರ ನಿಧನದ ಸುದ್ದಿ ಕೇಳಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಕೊಹ್ಲಿ, “ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನದ ಸುದ್ದಿ ಕೇಳಿ ಆಘಾತ ಮತ್ತು ದುಃಖಕ್ಕೊಳಗಾಗಿದ್ದೇನೆ. ಅವರ ಕುಟುಂಬಕ್ಕೆ ಈ ಕಠಿಣ ಸಮಯದಲ್ಲಿ ಧೈರ್ಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಸಹ ತಮ್ಮ ಸಂತಾಪ ಸೂಚಿಸಿದ್ದಾರೆ. “ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನದ ಸುದ್ದಿ ತುಂಬಾ ನೋವುಂಟುಮಾಡಿದೆ. ನಾವು ಒಂದೇ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದೆವು. ಆತ ಆಟವನ್ನು ಅಪಾರವಾಗಿ ಪ್ರೀತಿಸುವ ಶ್ರಮಜೀವಿ ಆಟಗಾರನಾಗಿದ್ದ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ” ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಅಮನ್‌ಪ್ರೀತ್ ಸಿಂಗ್ ಗಿಲ್ ಅವರನ್ನು ಶಿಸ್ತುಬದ್ಧ ಹಾಗೂ ಪರಿಶ್ರಮಿ ಆಟಗಾರನಾಗಿ ಗುರುತಿಸಲಾಗುತ್ತಿತ್ತು. ಅವರು ಆಟಗಾರರಾಗಿ ಮಾತ್ರವಲ್ಲದೆ, ಆಯ್ಕೆಗಾರರಾಗಿ ಸಹ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.





