ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ನ ಎರಡನೇ ದಿನ, ಆಕಾಶ್ ದೀಪ್ ನೈಟ್ ವಾಚ್‌ಮ್ಯಾನ್ ಆಗಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆದರೆ, ಮೂರನೇ ದಿನವಾದ ಶನಿವಾರ, ಈ ಯುವ ವೇಗಿ ಆಂಗ್ಲರಿಗೆ ದೊಡ್ಡ ತಲೆನೋವಾದರು. ಆಕಾಶ್ ದೀಪ್ ಬೆಳಿಗ್ಗೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿ, ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ದಾಖಲಿಸಿದರು. 70 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ಅರ್ಧಶತಕ ಪೂರ್ಣಗೊಳಿಸಿದ ಅವರು, 94 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರು. ಈ ಇನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಬಾರಿಸಿ, ಇಂಗ್ಲೆಂಡ್‌ನ ಉತ್ಸಾಹವನ್ನು ಕುಗ್ಗಿಸಿದರು. ಯಶಸ್ವಿ ಜೈಸ್ವಾಲ್ ಜೊತೆ 107 ರನ್‌ಗಳ ಜೊತೆಯಾಟವಾಡಿದರು.
ಎರಡನೇ ದಿನದಾಟದಲ್ಲಿ ಆಕಾಶ್ ದೀಪ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇಂಗ್ಲೆಂಡ್‌ನ ಬೆನ್ ಡಕೆಟ್‌ರನ್ನು ಸ್ಲೆಡ್ಜಿಂಗ್ ಮೂಲಕ ಕಾಡಿದ್ದ ಅವರು, 13ನೇ ಓವರ್‌ನಲ್ಲಿ ಡಕೆಟ್ ಅವರ ವಿಕೆಟ್ ಕಿತ್ತು ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಈ ವೇಳೆ ಡಕೆಟ್ ಅವರ ಭುಜದ ಮೇಲೆ ಕೈಯಿಟ್ಟು ಏನೋ ಮಾತನಾಡಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ನಡೆಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಖಂಡಿಸಿದ್ದರು.
ಮೂರನೇ ದಿನದಾಟದಲ್ಲಿ ಆಕಾಶ್ ದೀಪ್ ಅವರು ಅರ್ಧಶತಕದ ಬಳಿಕ, ಬೆನ್ ಡಕೆಟ್ ಅವರ ನಡವಳಿಕೆ ಕ್ರೀಡಾಸ್ಪೂರ್ತಿಯ ಮಾದರಿಯಾಯಿತು. ಆಕಾಶ್ ಅವರ ಭುಜದ ಮೇಲೆ ಕೈಯಿಟ್ಟು ಮಾತನಾಡಿದ ಡಕೆಟ್, ಅವರ ಬ್ಯಾಟಿಂಗ್‌ನ್ನು ಹೊಗಳಿದರು. ಕ್ರಿಕೆಟ್ ಅಭಿಮಾನಿಗಳು ಡಕೆಟ್ ಅವರ ಈ ಕ್ರೀಡಾಸ್ಪೂರ್ತಿಯನ್ನು ಮೆಚ್ಚಿಕೊಂಡಿದ್ದಾರೆ. ಆಕಾಶ್ ದೀಪ್ ಅವರ ಈ ಇನಿಂಗ್ಸ್ ಯಾರೂ ನಿರೀಕ್ಷಿಸದ ಆಶ್ಚರ್ಯವಾಗಿತ್ತು.
ಆಕಾಶ್ ದೀಪ್ ಅವರ ಹಿಂದಿನ ಅತ್ಯಧಿಕ ಟೆಸ್ಟ್ ಸ್ಕೋರ್ 31 ರನ್‌ಗಳಾಗಿದ್ದವು, ಇದನ್ನು ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ತೊಡೆಸಂದು ಗಾಯದಿಂದ ಬಳಲುತ್ತಿದ್ದ ಅವರನ್ನು ಮ್ಯಾಂಚೆಸ್ಟರ್ ಟೆಸ್ಟ್‌ನಿಂದ ಕೈಬಿಡಲಾಗಿತ್ತು. ಆದರೆ, ಐದನೇ ಟೆಸ್ಟ್‌ಗೆ ಮರಳಿದ ಆಕಾಶ್, ಬೌಲಿಂಗ್‌ನಲ್ಲಿಯೂ ಮಿಂಚಿದರು. ಒಂದೇ ಒಂದು ವಿಕೆಟ್ ಪಡೆದರೂ, ಅವರ ಬೌಲಿಂಗ್ ಶೈಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿತ್ತು.
2011ರ ಬಳಿಕ ಭಾರತದ ನೈಟ್ ವಾಚ್‌ಮ್ಯಾನ್ ಟೆಸ್ಟ್‌ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದು ಇದೇ ಮೊದಲ ಬಾರಿ. 14 ವರ್ಷಗಳ ಹಿಂದೆ ಅಮಿತ್ ಮಿಶ್ರಾ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ 84 ರನ್‌ಗಳ ಇನಿಂಗ್ಸ್ ಆಡಿದ್ದರು. ಆಕಾಶ್ ದೀಪ್ ಅವರ ಈ ಸಾಧನೆ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.





