ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜೀವನದ ಮೇಲೆ ಜನ್ಮಸಂಖ್ಯೆಯ ಪ್ರಭಾವ ಗಟ್ಟಿಯಾಗಿರುತ್ತದೆ. ದಿನನಿತ್ಯದ ಕೆಲಸ, ಹಣಕಾಸು, ಸಂಬಂಧಗಳು, ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಮೇಲೂ ಸಂಖ್ಯೆಗಳ ಕಂಪನಗಳು ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ. ಫೆಬ್ರವರಿ 6, ಶುಕ್ರವಾರದ ದಿನ ಜನ್ಮಸಂಖ್ಯೆ 1ರಿಂದ 9ರವರೆಗಿನವರಿಗೆ ಯಾವ ರೀತಿಯ ಫಲಿತಾಂಶಗಳು ಎದುರಾಗಲಿವೆ, ಯಾವ ಎಚ್ಚರಿಕೆ ವಹಿಸಬೇಕು ಮತ್ತು ಯಾವ ಪರಿಹಾರಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.
ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು)
ಈ ದಿನ ಹಣಕಾಸಿನ ವಿಷಯದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ನಿರೀಕ್ಷೆಗಿಂತ ಹೆಚ್ಚು ಆದಾಯ ಹರಿವು ಇರಬಹುದು. ಕೆಲವರು ಸಂಗೀತ ಅಥವಾ ಸಂಗೀತ ಸಾಧನ ಕಲಿಯಲು ಸೇರಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಅತಿಯಾದ ಖಾರ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ.
ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು)
ಹುದ್ದೆ ಬದಲಾವಣೆ ಅಥವಾ ಜವಾಬ್ದಾರಿಗಳನ್ನು ಹಸ್ತಾಂತರಿಸುವ ವಿಚಾರದಲ್ಲಿ ಚರ್ಚೆಗಳು ನಡೆಯಬಹುದು. ಈಗಾಗಲೇ ಸಂದರ್ಶನ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದವರಿಗೆ ಈ ದಿನ ಉತ್ತಮ ಮಾಹಿತಿ ದೊರೆಯುವ ಸಾಧ್ಯತೆ ಇದೆ. ನಿರ್ಧಾರಗಳನ್ನು ಆತುರದಲ್ಲಿ ತೆಗೆದುಕೊಳ್ಳದೆ ಯೋಚಿಸಿ ಮುಂದುವರಿಯುವುದು ಒಳಿತು.
ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು)
ಭಾವನಾತ್ಮಕ ಏರಿಳಿತಗಳು ಈ ದಿನ ನಿಮ್ಮನ್ನು ಕಾಡಬಹುದು. ಯಶಸ್ಸನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲವೂ ಎದುರಾಗಬಹುದು. ಆದರೆ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಉಪನ್ಯಾಸ ನೀಡಲು ಆಹ್ವಾನ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಗೆ ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ. ಈ ದಿನ ಪಾರಿವಾಳಗಳಿಗೆ ಕಾಳು ಹಾಕಿದರೆ ಕಾರ್ಯಸಾಧನೆಯಲ್ಲಿ ಅಡೆತಡೆಗಳು ಕಡಿಮೆಯಾಗುತ್ತವೆ. ಕೆಲಸವನ್ನು ಮುಂದೂಡುತ್ತಾ ಬಂದಿದ್ದರೆ ಅದಕ್ಕೂ ಪರಿಹಾರ ಸಿಗಲಿದೆ.
ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು)
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಸಣ್ಣ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಸಲಹೆ ಪಡೆಯುವುದು ಒಳಿತು. ಮಾತಿನ ಶೈಲಿಯಲ್ಲಿ ಸಂಯಮ ಇರಲಿ, ಇಲ್ಲವಾದರೆ ಸಣ್ಣ ಸಮಸ್ಯೆ ದೊಡ್ಡದಾಗಿ ಬೆಳೆಯುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 5 (5, 14, 23ರಂದು ಜನಿಸಿದವರು)
ನೀವು ನಂಬಿದ್ದ ವ್ಯಕ್ತಿಯೊಬ್ಬರು ತಮ್ಮ ಮಾತನ್ನು ಉಳಿಸಿಕೊಳ್ಳಲು ಅಸಮರ್ಥರಾಗಬಹುದು. ಇದರಿಂದ ಹಣಕಾಸಿನ ನಷ್ಟ ಅಥವಾ ನಿರಾಸೆ ಉಂಟಾಗಬಹುದು. ಮನೆಯಲ್ಲಿರುವ ಚಿಕ್ಕ ಮಕ್ಕಳ ಆರೋಗ್ಯಕ್ಕಾಗಿ ಹೆಚ್ಚುವರಿ ವೆಚ್ಚವಾಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು)
ಅಗತ್ಯವಿಲ್ಲದ ಖರೀದಿಗಳತ್ತ ಮನಸ್ಸು ಸೆಳೆಯಬಹುದು. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ನೀವೇ ಹೊಣೆ ಹೊತ್ತ ಕೆಲಸಗಳನ್ನು ಗಡುವಿನೊಳಗೆ ಪೂರ್ಣಗೊಳಿಸುವತ್ತ ಗಮನಹರಿಸಿ. ಹಿರಿಯರಿಗೆ ಮಾತಿನಿಂದ ನೋವುಂಟು ಮಾಡಿದ ವಿಚಾರ ಮನಸ್ಸನ್ನು ಕಾಡುತ್ತಿದ್ದರೆ, ಹಸುವಿಗೆ ಯಥಾಶಕ್ತಿ ಬಾಳೆಹಣ್ಣು ನೀಡುವುದು ಒಳಿತು.
ಜನ್ಮಸಂಖ್ಯೆ 7 (7, 16, 25ರಂದು ಜನಿಸಿದವರು)
ಭಾವನೆಗಳ ಮೇಲೆ ನಿಯಂತ್ರಣ ಅಗತ್ಯ. ಆ ಕ್ಷಣದ ಉತ್ಸಾಹದಲ್ಲಿ ಯಾರಿಗೂ ಮಾತು ಕೊಡಬೇಡಿ. ಉಡುಗೊರೆ ಖರೀದಿಯಲ್ಲಿ ಬಜೆಟ್ ಮೀರಬಹುದು. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಮನಶಾಂತಿ ಕದಡುತ್ತದೆ.
ಜನ್ಮಸಂಖ್ಯೆ 8 (8, 17, 26ರಂದು ಜನಿಸಿದವರು)
ಹಣದ ಆಧಾರದಲ್ಲಿ ನಿಮ್ಮನ್ನು ತೀರ್ಮಾನಿಸುತ್ತಾರೆ ಎಂಬ ಭಾವನೆ ಕಾಡಬಹುದು. ಮನೆಯಿಂದ ಹೊರಡುವ ಮುನ್ನ ಹನುಮಾನ್ ಚಾಲೀಸಾ ಪಠಿಸುವುದು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸಹೋದ್ಯೋಗಿಗಳಿಗೆ ಸಹಾಯ ಮಾಡಿದರೆ ಉತ್ತಮ ಫಲ ಸಿಗುತ್ತದೆ.
ಜನ್ಮಸಂಖ್ಯೆ 9 (9, 18, 27ರಂದು ಜನಿಸಿದವರು)
ಚಿತ್ರರಂಗ ಅಥವಾ ಮಾಧ್ಯಮ ಕ್ಷೇತ್ರದಲ್ಲಿರುವವರು ತಮ್ಮ ಮಾತು ಅಥವಾ ಸಾಮಾಜಿಕ ಜಾಲತಾಣ ಪೋಸ್ಟ್ಗಳಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಆದರೆ ಹೊಸ ಪರಿಚಯಗಳಿಂದ ಉದ್ಯೋಗಕ್ಕೆ ಸಂಬಂಧಿಸಿದ ಉತ್ತಮ ರೆಫರೆನ್ಸ್ಗಳು ದೊರೆಯಬಹುದು.





