ನವದೆಹಲಿ: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಸಂಸತ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲಿಗೆ ತಮ್ಮ ಮತವನ್ನು ಚಲಾಯಿಸಿದ್ದಾರೆ. ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ಮಂಗಳವಾರ ಚುನಾವಣೆ ಜರುಗುತ್ತಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ವಿಪಕ್ಷದ ಇಂಡಿಯಾ ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಸ್ಪರ್ಧಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸಂಸದೆ ಕಂಗನಾ ರನೌತ್ ಸಂಸತ್ ಭವನದಲ್ಲಿ ಮತ ಚಲಾಯಿಸಿದರು.
ಈ ಚುನಾವಣೆಯಲ್ಲಿ ಒಟ್ಟು 788 ಸಂಸದರು ಮತದಾನದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಇದರಲ್ಲಿ ಲೋಕಸಭೆಯ 543 ಮತ್ತು ರಾಜ್ಯಸಭೆಯ 245 ಸದಸ್ಯರು ಸೇರಿದ್ದಾರೆ. ಈ ಸಂಸದರನ್ನು ಎಲೆಕ್ಟೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಆದರೆ, ಪ್ರಸ್ತುತ ಲೋಕಸಭೆಯಲ್ಲಿ ಒಂದು ಸ್ಥಾನ ಮತ್ತು ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಖಾಲಿಯಿರುವುದರಿಂದ, 781 ಸಂಸದರು ಮಾತ್ರ ಮತದಾನ ಮಾಡಲಿದ್ದಾರೆ. ಮತದಾನವು ಗೌಪ್ಯವಾಗಿ ಮತಪತ್ರದ ಮೂಲಕ ನಡೆಯುತ್ತಿದ್ದು, ಸಂಸದರು ತಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಹಾಕಬಹುದು. ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ಬರೆಯುವ ಮೂಲಕ ಮತ ಚಲಾಯಿಸಲಾಗುತ್ತದೆ.
ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲು ಅಭ್ಯರ್ಥಿಯು ಕನಿಷ್ಠ 391 ಮತಗಳ ಸರಳ ಬಹುಮತವನ್ನು ಪಡೆಯಬೇಕು. ಮತದಾನದ ನಂತರ ಇದೇ ದಿನ ಮತ ಎಣಿಕೆ ನಡೆಯಲಿದ್ದು, ವಿಜೇತರ ಹೆಸರನ್ನು ಘೋಷಿಸಲಾಗುವುದು. ಎನ್‌ಡಿಎ ಕೂಟವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವುದರಿಂದ, ಸಿ.ಪಿ. ರಾಧಾಕೃಷ್ಣನ್ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಆದರೆ, ವಿಪಕ್ಷದ ಅಭ್ಯರ್ಥಿ ಸುದರ್ಶನ್ ರೆಡ್ಡಿಯೂ ತಮ್ಮ ಬೆಂಬಲಿಗರಿಂದ ಗಣನೀಯ ಮತಗಳನ್ನು ಪಡೆಯುವ ಯತ್ನದಲ್ಲಿದ್ದಾರೆ.