ಬಿಹಾರದಲ್ಲಿ ನಡೆದ ಒಂದು ಮಹತ್ವದ ವೈದ್ಯಕೀಯ-ವೈಜ್ಞಾನಿಕ ಅಧ್ಯಯನವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಮಕ್ಕಳಿಗೆ ಜೀವದಾಯಕವಾದ ತಾಯಿಯ ಎದೆಹಾಲಿನಲ್ಲೇ ವಿಷಕಾರಿ ಯುರೇನಿಯಂ (U-238) ಪತ್ತೆಯಾಗಿದೆ.
ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ, ನವದೆಹಲಿಯ ಏಮ್ಸ್ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಸಂಶೋಧಕರ ಒಕ್ಕೂಟ ಈ ಅಧ್ಯಯನವನ್ನು ಅಕ್ಟೋಬರ್ 2021ರಿಂದ ಜುಲೈ 2024ರವರೆಗೆ ನಡೆಸಿದೆ. ಡಾ. ಅರುಣ್ ಕುಮಾರ್, ಪ್ರೊ. ಅಶೋಕ್ ಘೋಷ್ ಮತ್ತು ಏಮ್ಸ್‌ನ ಡಾ. ಅಶೋಕ್ ಶರ್ಮಾ ಅವರ ನೇತೃತ್ವದಲ್ಲಿ ನಡೆದಿದೆ. ಈ ಸಂಶೋಧನೆಯು ಬಿಹಾರದ ಭೋಜ್‌ಪುರ, ಸಮಷ್ಟಿಪುರ, ಬೇಗುಸರಾಯ, ಖಗರಿಯಾ, ಕಟಿಹಾರ್ ಮತ್ತು ನಳಂದ ಈ ಆರು ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ತಾಯಂದಿರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು.
ಒಟ್ಟು 17 ರಿಂದ 35 ವರ್ಷದೊಳಗಿನ 40ಕ್ಕೂ ಹೆಚ್ಚು ತಾಯಂದಿರ ಎದೆಹಾಲಿನ ಮಾದರಿಗಳನ್ನು ಪರೀಕ್ಷಿಸಿದಾಗ, ಪ್ರತಿಯೊಂದು ಮಾದರಿಯಲ್ಲೂ ಯುರೇನಿಯಂ ಪತ್ತೆಯಾಗಿರುವುದು ಸಂಶೋಧಕರನ್ನೇ ಬೆಚ್ಚಿ ಬೀಳಿಸಿದೆ. ಮಾದರಿಗಳಲ್ಲಿನ ಯುರೇನಿಯಂ ಸಾಂದ್ರತೆ 0 ರಿಂದ 5.25 ಗ್ರಾಂ/ಲೀಟರ್ ವರೆಗೆ ದಾಖಲಾಗಿದೆ.
ಯುರೇನಿಯಂ ಎದೆಹಾಲಿಗೆ ಹೇಗೆ ಬಂತು?
ಯುರೇನಿಯಂ ಎದೆಹಾಲಿಗೆ ಹೇಗೆ ಬಂತು? ಇದಕ್ಕೆ ಮುಖ್ಯ ಕಾರಣವೆಂದರೆ ಕೊಳವೆಬಾವಿ ಮತ್ತು ಅಂತರ್ಜಲದ ಮಾಲಿನ್ಯ ಎಂದು ಸಂಶೋಧಕರು ತಿಳಿಸಿದ್ದಾರೆ. ಬಿಹಾರದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ 80%ಕ್ಕಿಂತ ಹೆಚ್ಚು ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ದುರುಪಯೋಗ, ಕೈಗಾರಿಕಾ ತ್ಯಾಜ್ಯ ಇವೆಲ್ಲವೂ ಭೂಗರ್ಭ ಜಲವನ್ನು ವಿಷಮಯಗೊಳಿಸಿವೆ. ಈಗಾಗಲೇ ಆರ್ಸೆನಿಕ್, ಸೀಸ, ಪಾದರಸ ಮಾಲಿನ್ಯಕ್ಕೆ ಹೆಸರಾದ ಬಿಹಾರಕ್ಕೆ ಯುರೇನಿಯಂ ಈ ಹೊಸ ಆತಂಕ ಹೆಚ್ಚಸಿದೆ.
“ಯುರೇನಿಯಂನ ನಿಖರ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅದು ಆಹಾರ ಸರಪಳಿಯಲ್ಲಿ ಪ್ರವೇಶಿಸಿ ತಾಯಿಯ ದೇಹದಲ್ಲಿ ಸಂಗ್ರಹವಾಗಿ ಎದೆಹಾಲು ಮೂಲಕ ಶಿಶುವಿಗೆ ತಲುಪುತ್ತಿದೆ. ಇದು ಅತ್ಯಂತ ಗಂಭೀರ” ಎಂದು ಏಮ್ಸ್‌ನ ಡಾ. ಅಶೋಕ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಶಿಶುಗಳ ಆರೋಗ್ಯದ ಮೇಲಿನ ಪರಿಣಾಮ
ಸಂಶೋಧನೆಯ ಸಹ-ಲೇಖಕ ಮತ್ತು ಏಮ್ಸ್‌ನ ಡಾ. ಅಶೋಕ್ ಶರ್ಮಾ ಅವರು ಇದನ್ನು “ತುಂಬಾ ಗಂಭೀರ ಮತ್ತು ಕಳವಳಕಾರಿ” ಸಮಸ್ಯೆ ಎಂದು ಎಚ್ಚರಿಸಿದ್ದಾರೆ. ಶಿಶುಗಳು ವಯಸ್ಕರಿಗಿಂತ ಯುರೇನಿಯಂನ ಹಾನಿಕಾರಕ ಪರಿಣಾಮಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಏಕೆಂದರೆ ಅವರ ಅಂಗಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
-
ಮೂತ್ರಪಿಂಡ ಮತ್ತು ನರಮಂಡಲ: ಯುರೇನಿಯಂ ಮೂತ್ರಪಿಂಡವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲದು ಮತ್ತು ನರವೈಜ್ಞಾನಿಕ ದುರ್ಬಲತೆಗೆ ಕಾರಣವಾಗಬಲ್ಲದು.
-
ಬೆಳವಣಿಗೆಗೆ ವಿಳಂಬ: ಶಿಶುಗಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಮಂದಗೊಳ್ಳುವ ಸಾಧ್ಯತೆ ಇದೆ.
-
ಕ್ಯಾನ್ಸರ್ ಅಪಾಯ: ವಿವಿಧ ರೀತಿಯ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸಬಲ್ಲದು.
ಈ ಆತಂಕಕಾರಿ ಪತ್ತೆಗಳ ನಡುವೆಯೂ, ಸಂಶೋಧಕರು ತಾಯಂದಿರಿಗೆ ಸ್ತನ್ಯಪಾನವನ್ನು ಮುಂದುವರಿಸಲೇಬೇಕು ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ತಾಯಿಯ ಹಾಲು ಶಿಶುಗಳಿಗೆ ರೋಗನಿರೋಧಕ ಶಕ್ತಿ, ಪೋಷಕಾಂಶ ಮತ್ತು ಬೆಳವಣಿಗೆಗೆ ಎದೆಹಾಲು ಅತ್ಯಗತ್ಯವಾಗಿದೆ. ವೈದ್ಯಕೀಯ ಸಲಹೆ ಇಲ್ಲದೆ ಸ್ತನ್ಯಪಾನ ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ.





