ಲಕ್ನೋ ಆ. 25: ಉತ್ತರ ಪ್ರದೇಶದ 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಹತ್ವದ ಉಡುಗೊರೆ ನೀಡಿದೆ. ವೃದ್ಧ ಮಹಿಳೆಯರಿಗೆ ಜೀವಿತಾವಧಿವರೆಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇಂದು ಮಂಗಳವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಲೋಕಮಾತಾ ಅಹಲ್ಯಾಬಾಯಿ ಮಾತೃಶಕ್ತಿ ಯೋಜನೆ’ಗೆ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಸರ್ಕಾರದ 24 ಪ್ರಮುಖ ಪ್ರಸ್ತಾಪಗಳಿಗೂ ಸಂಪುಟ ಒಪ್ಪಿಗೆ ನೀಡಿದೆ.
60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಫ್ರೀ ಬಸ್
ಯೋಜನೆಯಡಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನಿರ್ವಹಿಸುವ ಎಲ್ಲಾ ಬಸ್ಗಳಲ್ಲಿ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಉತ್ತರ ಪ್ರದೇಶದ ಮಹಿಳೆಯರು ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದು.
ಈ ಸೌಲಭ್ಯ ಉತ್ತರ ಪ್ರದೇಶದ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ. ಉಚಿತ ಪ್ರಯಾಣ ಪಡೆಯುವ ಸಂದರ್ಭದಲ್ಲಿ ಮಹಿಳೆಯರು ತಮ್ಮ ವಯಸ್ಸು ಮತ್ತು ಗುರುತನ್ನು ದೃಢಪಡಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇತರೆ ಮಾನ್ಯ ಗುರುತಿನ ದಾಖಲೆ ತೋರಿಸಬೇಕಾಗುತ್ತದೆ.
ರಾಜ್ಯ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ಪ್ರಕಾರ, ಈ ಯೋಜನೆಯಿಂದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರಯೋಜನ ದೊರೆಯುವ ನಿರೀಕ್ಷೆಯಿದೆ. ವೃದ್ಧ ಮಹಿಳೆಯರ ಪ್ರಯಾಣವನ್ನು ಸುಲಭಗೊಳಿಸುವುದು ಹಾಗೂ ಅವರಿಗೆ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಗಂಗಾ ಎಕ್ಸ್ಪ್ರೆಸ್ವೇ ವಿಸ್ತರಣೆಗೆ ಗ್ರೀನ್ ಸಿಗ್ನಲ್
ಇದೇ ಸಚಿವ ಸಂಪುಟ ಸಭೆಯಲ್ಲಿ ಗಂಗಾ ಎಕ್ಸ್ಪ್ರೆಸ್ವೇ ವಿಸ್ತರಣೆಗೆ ಕೂಡ ಅನುಮೋದನೆ ನೀಡಲಾಗಿದೆ. ಈ ವಿಸ್ತರಣೆಯ ಮೂಲಕ ಎಕ್ಸ್ಪ್ರೆಸ್ವೇಯನ್ನು ಉತ್ತರಾಖಂಡದ ಹರಿದ್ವಾರದವರೆಗೆ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ.
ಸುಮಾರು ರೂ. 10,761 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದರಿಂದ ಉತ್ತರ ಪ್ರದೇಶದ ಬಿಜ್ನೋರ್ ಮತ್ತು ಉತ್ತರಾಖಂಡದ ಹರಿದ್ವಾರ ನಡುವಿನ ರಸ್ತೆ ಸಂಪರ್ಕ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ವೃದ್ಧ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಮತ್ತು ಪ್ರಮುಖ ಹೆದ್ದಾರಿ ವಿಸ್ತರಣೆಗೆ ಅನುಮೋದನೆ ನೀಡುವ ಮೂಲಕ ಯೋಗಿ ಸರ್ಕಾರದ ಸಚಿವ ಸಂಪುಟ ಸಭೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.





