ನವದೆಹಲಿ: ದೇಶದ ಆರ್ಥಿಕ ದಿಕ್ಕು ನಿರ್ಧರಿಸುವ 2026-27ರ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಇದರ ಪೂರ್ವಭಾವಿಯಾಗಿ ಇಂದು (ಜನವರಿ 27) ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್‌ನಲ್ಲಿ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ವನ್ನು ಆಯೋಜಿಸಲಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರಂಭದಲ್ಲಿ ಭಾಗವಹಿಸಿದರು.
ಪ್ರತಿ ವರ್ಷ ಬಜೆಟ್ ಮಂಡನೆಗೂ ಮುನ್ನ ನಡೆಯುವ ಹಲ್ವಾ ಸಮಾರಂಭವು ಬಜೆಟ್ ತಯಾರಿಕೆಯ ಅಂತಿಮ ಹಂತವನ್ನು ಸೂಚಿಸುವ ಮಹತ್ವದ ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಿದ ಹಲ್ವಾವನ್ನು ಬಜೆಟ್ ಸಿದ್ಧತೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿತರಿಸಲಾಗುತ್ತದೆ.
ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲಿ ನಡೆದ ಈ ಸಮಾರಂಭದಲ್ಲಿ ಹಣಕಾಸು ಸಚಿವರೊಂದಿಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಸಚಿವಾಲಯದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಬಜೆಟ್ ತಂಡದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಹಣಕಾಸು ಸಚಿವೆ ಬಜೆಟ್ ಮುದ್ರಣಾಲಯಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಬಜೆಟ್ ತಂಡದ ಎಲ್ಲ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿ, ಉತ್ತಮ ಹಾಗೂ ಸಮರ್ಥ ಬಜೆಟ್ ರೂಪಿಸುವಂತೆ ಪ್ರೇರೇಪಿಸಿದರು.
ಹಲ್ವಾ ಸಮಾರಂಭದ ಮಹತ್ವ ಏನು?
ಹಲ್ವಾ ಸಮಾರಂಭವು ಕೇವಲ ಸಿಹಿ ಹಂಚುವ ಕಾರ್ಯಕ್ರಮವಲ್ಲ. ಇದು ಬಜೆಟ್ ತಯಾರಿಕೆಯ ಅಂತಿಮ ಹಂತಕ್ಕೆ ಅಧಿಕೃತ ಚಾಲನೆ ನೀಡುವ ವಿಧಿವಿಧಾನವಾಗಿದೆ. ಈ ಸಮಾರಂಭದ ನಂತರ ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹೊರಗಿನ ಜಗತ್ತಿನಿಂದ ಪ್ರತ್ಯೇಕಿಸಲಾಗುತ್ತದೆ. ಇದನ್ನು ‘ಕ್ವಾರಂಟೈನ್ ಪ್ರಕ್ರಿಯೆ’ ಎಂದು ಕರೆಯಲಾಗುತ್ತದೆ.
ಈ ಕ್ವಾರಂಟೈನ್ ಅವಧಿಯಲ್ಲಿ ಅಧಿಕಾರಿಗಳು ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲೇ ವಾಸಿಸುತ್ತಾರೆ. ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುವವರೆಗೆ ಅವರು ಹೊರಬರಲು ಅವಕಾಶ ಇರುವುದಿಲ್ಲ. ಇದರ ಉದ್ದೇಶ ಬಜೆಟ್ ವಿಷಯಗಳು ಮುಂಚಿತವಾಗಿ ಬಹಿರಂಗವಾಗದಂತೆ ಕಟ್ಟುನಿಟ್ಟಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಾಗಿದೆ. ಹಣಕಾಸು ಸಚಿವೆ ತಮ್ಮ ಬಜೆಟ್ ಭಾಷಣವನ್ನು ಲೋಕಸಭೆಯಲ್ಲಿ ಪೂರ್ಣಗೊಳಿಸಿದ ನಂತರವೇ ಈ ಸಿಬ್ಬಂದಿಗೆ ಹೊರಬರುವ ಅವಕಾಶ ದೊರೆಯುತ್ತದೆ.
ಡಿಜಿಟಲ್ ರೂಪದಲ್ಲೇ ಬಜೆಟ್ ದಾಖಲೆಗಳು
ಹಿಂದಿನ ಐದು ಪೂರ್ಣ ಬಜೆಟ್‌ಗಳು ಮತ್ತು ಒಂದು ಮಧ್ಯಂತರ ಬಜೆಟ್‌ನಂತೆ, ಈ ಬಾರಿಯೂ 2026-27ರ ಪೂರ್ಣ ಕೇಂದ್ರ ಬಜೆಟ್ ಡಿಜಿಟಲ್ ರೂಪದಲ್ಲೇ ಲಭ್ಯವಾಗಲಿದೆ. ಅನುದಾನಗಳ ಬೇಡಿಕೆಗಳು, ಹಣಕಾಸು ಮಸೂದೆ ಸೇರಿದಂತೆ ಎಲ್ಲಾ ಬಜೆಟ್ ದಾಖಲೆಗಳನ್ನು ‘ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್’ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ.
ಈ ಬಾರಿಯ ಬಜೆಟ್ ಮೇಲೆ ರೈತರು, ಮಧ್ಯಮ ವರ್ಗ, ಉದ್ಯಮಿಗಳು, ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ಸೇರಿದಂತೆ ವಿವಿಧ ವರ್ಗಗಳ ಭಾರಿ ನಿರೀಕ್ಷೆಗಳಿವೆ. ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ, ಕೃಷಿ ಬೆಂಬಲ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಕುರಿತು ಜನರು ಕಾತರದಿಂದ ಕಾಯುತ್ತಿದ್ದಾರೆ.





