ಚೆನ್ನೈ, ಜುಲೈ 01: ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಂದು ಸಂಚಲನಕಾರಿ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ವಿಜಯ್ ಸಾರಥ್ಯದ ಟಿವಿಕೆ (Tamilaga Vettri Kazhagam) ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಡಿಎಂಕೆ ನಾಯಕರು ಸಂಚು ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಟಿವಿಕೆಯ 15 ಶಾಸಕರಿಗೆ ರಾಜೀನಾಮೆ ನೀಡಲು ಪ್ರತಿ ಶಾಸಕನಿಗೆ ₹35 ಕೋಟಿ ಆಮಿಷ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಸಚಿವ ನಿರ್ಮಲ್ ಕುಮಾರ್ ಆರೋಪ
ಟಿವಿಕೆ ಸರ್ಕಾರದ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಈ ಸಂಚಿನ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. “ಡಿಎಂಕೆ ನಾಯಕರು ನಮ್ಮ ಸರ್ಕಾರವನ್ನು ಉರುಳಿಸಲು ಖಾಸಗಿ ಏಜೆನ್ಸಿಗಳ ಮೂಲಕ ನಮ್ಮ ಶಾಸಕರಿಗೆ ಬೆದರಿಕೆ ಮತ್ತು ಆಮಿಷ ಒಡ್ಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಚಾರ” ಎಂದು ಅವರು ಆರೋಪಿಸಿದ್ದಾರೆ.
ಸೆಂತಿಲ್ ಬಾಲಾಜಿ ಕಿಂಗ್ ಪಿನ್?
ಈ ಆಮಿಷ ಪ್ರಕರಣದಲ್ಲಿ ಡಿಎಂಕೆಯ ಹಿರಿಯ ನಾಯಕ ವಿ. ಸೆಂತಿಲ್ ಬಾಲಾಜಿ ಅವರು ‘ಕಿಂಗ್ ಪಿನ್’ ಆಗಿದ್ದಾರೆ ಎಂದು ಶಂಕಿಸಲಾಗಿದೆ. ಸೆಂತಿಲ್ ಬಾಲಾಜಿ ಅವರ ಪಾತ್ರವು ಮತ್ತಷ್ಟು ತನಿಖೆಗೆ ಒಳಪಟ್ಟಿದೆ.
ಶಾಸಕ ಇಳಯರಾಜ ದೂರು
ಟಿವಿಕೆ ಶಾಸಕ ಇಳಯರಾಜ್ ಅವರು ಈ ಸಂಚು ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದು, ಇದರಿಂದಾಗಿ ಸಂಚು ಬಯಲಾಗಿದೆ. “ನನಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ರಾಜೀನಾಮೆ ನೀಡಿದರೆ ₹35 ಕೋಟಿ ಮತ್ತು ರಾಜ್ಯ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಾನು ಒಪ್ಪದಿದ್ದಾಗ ಬೆದರಿಕೆ ಹಾಕಿದ್ದಾರೆ” ಎಂದು ಅವರು ತಮ್ಳ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಖಾಸಗಿ ಏಜೆನ್ಸಿಗಳ ಮೂಲಕ ಈ ಸಂಚು ನಡೆಸಲಾಗಿದೆ ಎಂಬುದು ದೃಢಪಟ್ಟಿದೆ.
ಸಂಚು ವಿಫಲ
ಆದಾಗ್ಯೂ, ಟಿವಿಕೆ ಸರ್ಕಾರವನ್ನು ಉರುಳಿಸಲು ನಡೆಸಿದ ಈ ಸಂಚು ವಿಫಲವಾಗಿದೆ. ಟಿವಿಕೆ ಪಕ್ಷವು 2026ರ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು . ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರಕಾರವನ್ನು ರಚಿಸಿ, ಮೇ 10, 2026ರಂದು ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು .