ನವದೆಹಲಿ, ಏಪ್ರಿಲ್ 1: ಕಿಕ್ಕಿರಿದ ರೈಲಿನ ಪ್ರಯಾಣಿಕರ ನಡುವೆ, ಅವ್ಯವಸ್ಥೆಯ ಮಧ್ಯೆ ಮಾನವೀಯತೆಯ ಒಂದು ಸಣ್ಣ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶ ಕಾಯುವ ಸೈನಿಕರಿಗೆ ಸೀಟು ಬಿಟ್ಟುಕೊಡುವ ಮೂಲಕ ಟಿಟಿಇ ಒಬ್ಬರು ಮಾನವೀಯತೆ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ಸೈನಿಕರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಮಲಗಿರುವ ದೃಶ್ಯ ವಿಡಿಯೋದಲ್ಲಿ ಕಾಣುತ್ತದೆ..ಅವರು ಚುನಾವಣಾ ಕರ್ತವ್ಯಕ್ಕಾಗಿ ತುರ್ತಾಗಿ ಪ್ರಯಾಣ ಮಾಡುತ್ತಿದ್ದ ಕಾರಣ ದೃಢೀಕೃತ ಟಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಯೋಧರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಮಲಗಿದ್ದರು.
ಟಿಟಿಇಯ ಸ್ಪಂದನೆ
ಈ ಸ್ಥಿತಿಯನ್ನು ಗಮನಿಸಿದ ಟಿಟಿಇ ಅವರು, ಯೋಧರ ಬಳಿಗೆ ತೆರಳಿ ಅವರನ್ನು ಎಬ್ಬಿಸಿದರು. ಅವರ ಐಡಿ ಕಾರ್ಡ್ಗಳನ್ನು ಪರಿಶೀಲಿಸಿದ ನಂತರ, ಗೌರವಪೂರ್ವಕವಾಗಿ ಸೀಟಿನ ವ್ಯವಸ್ಥೆ ಮಾಡಿಕೊಟ್ಟರು.
ವಿಡಿಯೋದಲ್ಲಿ ಟಿಟಿಇ ಅವರು ಯೋಧರ ಜೊತೆ ಮಾತನಾಡುತ್ತಾ, ಅವರನ್ನು ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಯೋಧರಿಗೆ ಸೀಟು ದೊರಕಿದಾಗ ಅವರ ಮುಖದಲ್ಲಿ ಮೂಡಿದ ಸಮಾಧಾನದ ಭಾವವು ಎಲ್ಲರ ಮನಸ್ಸನ್ನು ಮುಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೂಡಲೇ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಟಿಟಿಇಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ನೆಟ್ಟಿಗರೊಬ್ಬರು, “ನಾವೆಲ್ಲರೂ ದೇಶಭಕ್ತರಾಗಿರಬಹುದು. ಆದರೆ ಈ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಈ ಧೈರ್ಯಶಾಲಿ ಯೋಧರಿಗಾಗಿ ಏನು ಬೇಕಾದರೂ ಮಾಡಿ” ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು, “ಇಂತಹ ಮಾನವೀಯತೆ ನಿಜಕ್ಕೂ ಅಪರೂಪ. ಟಿಟಿಇ ಸಾಹೇಬರಿಗೆ ಸಲಾಂ” ಎಂದು ಕಾಮೆಂಟ್ ಮಾಡಿದ್ದಾರೆ. “ಸೈನಿಕರು ನಮ್ಮ ದೇಶದ ರಕ್ಷಕರು. ಅವರಿಗೆ ಸಿಗಬೇಕಾದ ಗೌರವ ಸಿಗಬೇಕು. ಟಿಟಿಇ ಅವರು ಮಾಡಿದ ಕೆಲಸ ಅದ್ಭುತ” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ರೈಲ್ವೆ ಇಲಾಖೆಯಲ್ಲಿಯೂ ಈ ಘಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಟಿಟಿಇ ಅವರ ಕಾರ್ಯವನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.





