ತಿರುಪತಿ: ತಹಸೀಲ್ದಾರ್‌ವೊಬ್ಬರು ಮಹಿಳಾ ಕಂದಾಯ ಅಧಿಕಾರಿಯ ಮನೆಗೆ ಬೆತ್ತಲೆಯಾಗಿ ಆಗಮಿಸಿ, ಅನುಚಿತವಾಗಿ ವರ್ತಿಸಿದ ಘಟನೆಯ ವಿಡಿಯೊ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದಿದ್ದು, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಹಸೀಲ್ದಾರ್‌ನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ಘಟನೆಯ ವಿವರ
ನಾಯುಡುಪೇಟೆಯಲ್ಲಿ ವಾಸಿಸುವ ಮಹಿಳಾ ಕಂದಾಯ ಅಧಿಕಾರಿಗೆ ತಹಸೀಲ್ದಾರ್ ರಾಮಯ್ಯ ದೀರ್ಘಕಾಲದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಬುಧವಾರ, ಈತ ಬೆತ್ತಲೆಯಾಗಿ ಆಕೆಯ ಮನೆಗೆ ಆಗಮಿಸಿದ್ದಾನೆ. ಅಷ್ಟೇ ಅಲ್ಲ, ಅನೈತಿಕವಾಗಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಯಿಂದ ಕೋಪಗೊಂಡ ಮಹಿಳಾ ಅಧಿಕಾರಿಯ ತಾಯಿ, ತಹಸೀಲ್ದಾರ್‌ನನ್ನು ಪೊರಕೆಯಿಂದ ಥಳಿಸಿದ್ದಾರೆ. ಈ ದೃಶ್ಯವನ್ನು ಯಾರೋ ಕಿಡಿಗೇಡಿಗಳು ವಿಡಿಯೊದಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ಕೋಪಗೊಂಡ ಮಹಿಳೆಯ ತಾಯಿ ತಹಸೀಲ್ದಾರ್‌ನನ್ನು ತೀವ್ರವಾಗಿ ಗದರಿಸುವುದು ಮತ್ತು ಪೊರಕೆಯಿಂದ ಥಳಿಸುವ ದೃಶ್ಯ ಕಾಣಿಸುತ್ತದೆ. ಈ ವಿಡಿಯೊ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿ, ಶೇರ್ ಮಾಡಿದ್ದಾರೆ.
VIDEO: కోరిక తీర్చాలంటూ మహిళా VRO ఇంటికెళ్లిన MRO.. తర్వాత.. https://t.co/ZVNPyj953W pic.twitter.com/EWT160v52E
— Dr.N.B.Sudhakar Reddy (@DrNBSReddy) July 31, 2025
ಜನರ ಆಕ್ರೋಶ
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಜನರು ತಹಸೀಲ್ದಾರ್‌ನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಿರುಕುಳಕ್ಕೊಳಗಾದ ಮಹಿಳಾ ಅಧಿಕಾರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. “ಇಂತಹ ಜನರು ಸರ್ಕಾರಿ ಹುದ್ದೆಯಲ್ಲಿರುವುದೇ ಆಶ್ಚರ್ಯ. ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, “ಮಹಿಳೆಯ ತಾಯಿಯ ಧೈರ್ಯಕ್ಕೆ ಸಲಾಮ್. ಇಂತಹ ಕಿರುಕುಳಗಾರರಿಗೆ ಇದೇ ಸರಿಯಾದ ಶಿಕ್ಷೆ,” ಎಂದು ಬರೆದಿದ್ದಾರೆ.
ಮಹಿಳಾ ಕಂದಾಯ ಅಧಿಕಾರಿಯ ಕುಟುಂಬವು ಈ ಘಟನೆಯ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದೆ. ದೂರಿನಲ್ಲಿ, ತಹಸೀಲ್ದಾರ್ ರಾಮಯ್ಯನಿಂದ ದೀರ್ಘಕಾಲದಿಂದ ಲೈಂಗಿಕ ಕಿರುಕುಳವಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಗಂಭೀರ ಆರೋಪವನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿ ವೆಂಕಟೇಶ್ವರ್ ತಕ್ಷಣ ಕ್ರಮ ಕೈಗೊಂಡಿದ್ದಾರೆ. ತಹಸೀಲ್ದಾರ್ ರಾಮಯ್ಯನನ್ನು ಸೇವೆಯಿಂದ ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.





