ಹೈದರಾಬಾದ್: ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಪೋಷಕರನ್ನು ನಿರ್ಲಕ್ಷಿಸುವ ನೌಕರರ ಮಾಸಿಕ ವೇತನದಲ್ಲಿ ಶೇಕಡಾ 10 ರಷ್ಟು ಮೊತ್ತವನ್ನು ಕಡಿತಗೊಳಿಸಿ, ಅದನ್ನು ನೇರವಾಗಿ ಪೋಷಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಹೊಸ ಕಾನೂನನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ಸೋಮವಾರ ಹೈದರಾಬಾದ್‌ನಲ್ಲಿ ನಡೆದ ವಿಕಲಚೇತನರಿಗೆ ಆಧುನಿಕ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಹತ್ವದ ನಿರ್ಧಾರವನ್ನು ಘೊಷಿಸಿದ್ದಾರೆ. ಪೋಷಕರು ತಮ್ಮ ಮಕ್ಕಳ ವಿರುದ್ಧ ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಯಸ್ಸಾದ ಕಾಲದಲ್ಲಿ ಪೋಷಕರನ್ನು ಅನಾಥರನ್ನಾಗಿ ಬಿಡುವ ನೀತಿಗೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯ ಎಂದು ಅವರು ಹೇಳಿದರು.
ಕೇವಲ ಶಿಕ್ಷೆಯ ರೂಪದ ಕ್ರಮಗಳಷ್ಟೇ ಅಲ್ಲದೆ, ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಸರ್ಕಾರವು ‘ಪ್ರಾಣಮ್’ ಹೆಸರಿನ ಡೇಕೇರ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ 50 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಲ್ಲದೆ, 2026-27ರ ಬಜೆಟ್‌ನಲ್ಲಿ ಎಲ್ಲರಿಗೂ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಹೊಸ ಆರೋಗ್ಯ ನೀತಿಯನ್ನು ಪರಿಚಯಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ತೃತೀಯ ಲಿಂಗದವರಿಗೂ ರಾಜಕೀಯ ಪ್ರಾತಿನಿಧ್ಯ:
ಸಾಮಾಜಿಕ ನ್ಯಾಯದ ಭಾಗವಾಗಿ ತೆಲಂಗಾಣ ಸರ್ಕಾರವು ಮತ್ತೊಂದು ಐತಿಹಾಸಿಕ ಘೋಷಣೆ ಮಾಡಿದೆ. ಮುಂದಿನ ಚುನಾವಣೆಗಳಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ತೃತೀಯ ಲಿಂಗದ ವ್ಯಕ್ತಿಗಳನ್ನು ‘ಕೋ-ಆಪ್ಷನ್’ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗುವುದು. ಪ್ರತಿ ಪಾಲಿಕೆಯಲ್ಲಿ ತೃತೀಯ ಲಿಂಗದವರಿಗೆ ಒಂದು ಸ್ಥಾನ ಮೀಸಲಿಡುವ ಮೂಲಕ ಅವರ ಸಮಸ್ಯೆಗಳಿಗೆ ಧ್ವನಿ ನೀಡಲು ಸರ್ಕಾರ ನಿರ್ಧರಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ವಿಕಲಚೇತನರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಕೋಟಾ ನೀಡುವುದಾಗಿ ತಿಳಿಸಿದರು. ಹೊಸದಾಗಿ ಮದುವೆಯಾಗುವ ವಿಕಲಚೇತನ ದಂಪತಿಗಳಿಗೆ ಸರ್ಕಾರ 2 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದೆ. ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರ ಸಾಧನೆಯನ್ನು ಸ್ಮರಿಸಿದ ಸಿಎಂ, ಅಂಗವೈಕಲ್ಯವು ಯಶಸ್ಸಿಗೆ ಅಡ್ಡಿಯಾಗಬಾರದು ಎಂದು ಹೇಲಿದ್ದಾರೆ.
ತೆಲಂಗಾಣವು ದೇಶದಲ್ಲೇ ಮೊದಲ ಬಾರಿಗೆ ಜಾತಿ ಜನಗಣತಿ ನಡೆಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ತೆಲಂಗಾಣದ ಈ ನಡೆಯಿಂದಾಗಿ ಕೇಂದ್ರ ಸರ್ಕಾರವೂ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಸಮೀಕ್ಷೆಗೆ ಒಪ್ಪುವಂತಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಎಸ್‌ಸಿ ವರ್ಗೀಕರಣ ಜಾರಿಗೆ ತರುವ ಮೂಲಕ ಸಮಾನ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.





