ಹೈದರಾಬಾದ್: ಕರ್ನಾಟಕದಂತೆ ಚುನಾವಣಾ ಗ್ಯಾರಂಟಿಗಳನ್ನು ಘೋಷಿಸಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ರಾಜ್ಯದ ಬೊಕ್ಕಸ ಸಂಪೂರ್ಣ ಬರಿದಾಗಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಉಸ್ಮಾನಿಯಾ ವಿಶ್ವವಿದ್ಯಾಲಯದ ಕಟ್ಟಡಗಳ ಲೋಕಾರ್ಪಣೆ ಮತ್ತು ಭೂಮಿಪೂಜೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, “ಸರ್ಕಾರದ ಬೊಕ್ಕಸ ಸಂಪೂರ್ಣ ಒಣಗಿದೆ. ಹಣ ಸಂಗ್ರಹಿಸಲು ಮಾರಾಟ ಮಾಡಲು ಭೂಮಿಯೂ ಇಲ್ಲ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಆರ್ಥಿಕ ಸ್ಥಿತಿಯ ಕುರಿತು ರೆಡ್ಡಿ ಈ ಹಿಂದೆಯೂ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. “ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಆರ್ಥಿಕ ಸ್ಥಿತಿಯ ಸಂಪೂರ್ಣ ಚಿತ್ರಣ ಗೊತ್ತಾಯಿತು. ನಾವು ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸಲು ಸರ್ಕಾರದ ಬಳಿ ಸಾಕಷ್ಟು ಹಣವಿಲ್ಲ” ಎಂದು ಒಪ್ಪಿಕೊಂಡಿದ್ದರು. ಅವರು ಕೇಂದ್ರ ಸರ್ಕಾರದಿಂದ ಸಹಾಯ ಕೋರಿದಾಗಲೂ, “ಯಾರೂ ಬಾಗಿಲು ತೆರೆಯುತ್ತಿಲ್ಲ” ಎಂದು ತಮ್ಮ ಆತಂಕವನ್ನು ಹಂಚಿಕೊಂಡಿದ್ದರು.
ತೆಲಂಗಾಣ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಆರು ಗ್ಯಾರಂಟಿಗಳನ್ನು ಘೋಷಿಸಿತ್ತು. ಇವುಗಳಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್, ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ರೈತರಿಗೆ ಮತ್ತು ಹಿಡುವಳಿದಾರರಿಗೆ ಎಕರೆಗೆ 15,000 ರೂ. ನೆರವು, ಕೃಷಿ ಕಾರ್ಮಿಕರಿಗೆ 12,000 ರೂ., ವಸತಿರಹಿತರಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ರೂ., ತೆಲಂಗಾಣ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಶಿಕ್ಷಣ ಭರವಸೆ ಕಾರ್ಡ್, ವೃದ್ಧರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಕಲ್ಲು ಕ್ವಾರಿಗಳು, ಕೈಮಗ್ಗ ಕಾರ್ಮಿಕರು, ಎಚ್‌ಐವಿ ಪೀಡಿತರು, ಡಯಾಲಿಸಿಸ್ ರೋಗಿಗಳಿಗೆ 4,000 ರೂ. ಮಾಸಿಕ ಪಿಂಚಣಿ ಮತ್ತು ರಾಜೀವ್ ಆರೋಗ್ಯ ವಿಮೆಯಡಿ 10 ಲಕ್ಷ ರೂ. ಸೇರಿವೆ.
ರೆಡ್ಡಿ ಅವರ ಹೇಳಿಕೆಯ ಪ್ರಕಾರ, ಈ ಗ್ಯಾರಂಟಿಗಳನ್ನು ಈಡೇರಿಸಲು ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣವಿಲ್ಲ. “ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ತೆಲಂಗಾಣವು ಶೇ.1.5ರಷ್ಟು ಕಡಿಮೆ ಹಣದುಬ್ಬರ ದರದೊಂದಿಗೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ” ಎಂದು ತಿಳಿಸಿದ್ದಾರೆ.





