ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ವರಿಷ್ಠ ನಾಯಕ ಲಾಲೂ ಪ್ರಸಾದ್ ಯಾದವ್ ತಮ್ಮ ಪುತ್ರ ತೇಜ್ ಪ್ರತಾಪ್ ಯಾದವ್‌ರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಲಾಲು ಪ್ರಸಾದ್ ಯಾದವ್ ಮಾಹಿತಿ ಹಂಚಿಕೊಂಡಿದ್ದಾರೆ. ಪಕ್ಷದ ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿರುವುದರಿಂದ ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಹೇಳಿದ್ದಾರೆ..
ತೇಜ್ ಪ್ರತಾಪ್ ಯಾದವ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಅನುಷ್ಕಾ ಯಾದವ್ ಎಂಬಾಕೆಯ ಜೊತೆ ಕಳೆದ 12 ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ. ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ಆರ್‌ಜೆಡಿ ಪಕ್ಷದೊಳಗೆ ಮತ್ತು ಲಾಲೂ ಕುಟುಂಬದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಲಾಲೂ ಯಾದವ್ ತಮ್ಮ ಹೇಳಿಕೆಯಲ್ಲಿ, “ತೇಜ್ ಪ್ರತಾಪ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಯಾರ ಜೊತೆಗಾದರೂ ಇರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ನೈತಿಕ ಮೌಲ್ಯಗಳು ಅತ್ಯಗತ್ಯ” ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಲಾಲೂ ತಮ್ಮ ಮಗನ ವೈಯಕ್ತಿಕ ನಿರ್ಧಾರಗಳಲ್ಲಿ ಮೂಗು ತೂರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷದ ಗೌರವ ಮತ್ತು ಶಿಸ್ತಿನ ವಿಷಯದಲ್ಲಿ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.
ತೇಜ್ ಪ್ರತಾಪ್ 2018ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ರಾಯ್ ಅವರ ಮೊಮ್ಮಗಳಾದ ಐಶ್ವರ್ಯ ರಾಯ್‌ರನ್ನು ಮದುವೆಯಾಗಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಈ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಕೊನೆಗೊಂಡಿತ್ತು. ಆದರೆ, ಇದೀಗ ಅನುಷ್ಕಾ ಯಾದವ್ ಜೊತೆಗಿನ ಸಂಬಂಧದ ಬಗ್ಗೆ ತೇಜ್ ಅವರೇ ಬಹಿರಂಗವಾಗಿ ಮಾತನಾಡಿರುವುದು, ಈ ಸಂಬಂಧವು ಮದುವೆಗೂ ಮುನ್ನ, ಮದುವೆಯ ಸಮಯದಲ್ಲಿ ಮತ್ತು ವಿಚ್ಛೇದನದ ನಂತರವೂ ಇರುವುದಾಗಿ ತಿಳಿದುಬಂದಿದೆ.
ಲಾಲೂ ಯಾದವ್‌ರ ಈ ಕಠಿಣ ನಿರ್ಧಾರವು ರಾಜಕೀಯ ವಲಯದಲ್ಲಿ ತೇಜ್ ಪ್ರತಾಪ್‌ರ ಭವಿಷ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಕ್ರಮವನ್ನು ಲಾಲೂ ಯಾದವ್‌ರ ಶಿಸ್ತಿನ ನಿಲುವಾಗಿ ಪರಿಗಣಿಸಿದರೆ, ಇನ್ನು ಕೆಲವರು ಇದನ್ನು ಕುಟುಂಬದ ಒಳಗಿನ ರಾಜಕೀಯ ಕಸರತ್ತು ಎಂದು ಭಾವಿಸಿದ್ದಾರೆ. ತೇಜಸ್ವಿ ಯಾದವ್, ತೇಜ್ ಪ್ರತಾಪ್‌ರ ಕಿರಿಯ ಸಹೋದರ, ಈ ವಿಷಯದ ಬಗ್ಗೆ ಮಾತನಾಡುವುದನ್ನು ತಪ್ಪಿಸಿದ್ದಾರೆ. “ತೇಜ್ ಪ್ರತಾಪ್‌ರ ವೈಯಕ್ತಿಕ ನಿರ್ಧಾರಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ” ಎಂದು ತೇಜಸ್ವಿ ಹೇಳಿದ್ದಾರೆ.
