ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಸಬ್‌ಸ್ಕ್ರಿಪ್ಷನ್ ಮಾಡೆಲ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಮಾದರಿಯಲ್ಲಿ ಪ್ರೀಮಿಯಂ ಸೇವೆಗಳನ್ನು ನೀಡಲು ಕಂಪನಿ ಮುಂದಾಗಿದೆ. ‘ವಾಟ್ಸಾಪ್ ಪ್ಲಸ್’ ಎಂಬ ಈ ಸಬ್‌ಸ್ಕ್ರಿಪ್ಷನ್ ಸೇವೆ ಜಾಗತಿಕವಾಗಿ ಪರೀಕ್ಷಾ ಹಂತದಲ್ಲಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಪ್ರಾಯೋಗಿಕವಾಗಿ ಲಭ್ಯವಾಗಿದೆ. ಶೀಘ್ರದಲ್ಲೇ ಭಾರತದ ಬಳಕೆದಾರರೂ ಈ ಸೌಲಭ್ಯವನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಯಾವ ಫೀಚರ್‌ಗಳಿಗೆ ಹಣ ಪಾವತಿಸಬೇಕು?
ವಾಟ್ಸಾಪ್‌ನ ಮೂಲಭೂತ ಸೇವೆಗಳಾದ ಮೆಸೇಜಿಂಗ್, ವಾಯ್ಸ್ ಮತ್ತು ವಿಡಿಯೋ ಕರೆಗಳು ಎಂದಿನಂತೆ ಉಚಿತವಾಗಿರುತ್ತವೆ. ಆದರೆ ಆ್ಯಪ್ ಅನ್ನು ಹೆಚ್ಚು ವೈವಿಧ್ಯಮಯವಾಗಿ ಬಳಸಲು ಇಚ್ಛಿಸುವವರಿಗಾಗಿ ಪ್ರೀಮಿಯಂ ಪ್ಯಾಕ್‌ನಲ್ಲಿ ವಿಶೇಷ ಫೀಚರ್‌ಗಳನ್ನು ನೀಡಲಾಗುತ್ತಿದೆ. ಅವುಗಳೆಂದರೆ,
-
ಹೆಚ್ಚುವರಿ ಚಾಟ್ ಪಿನ್: ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚಾಗಿ 20 ಚಾಟ್ಗಳನ್ನು ಪಿನ್ ಮಾಡುವ ಸೌಲಭ್ಯ.
-
ಹೊಸ ಥೀಮ್‌ಗಳು: ಆ್ಯಪ್ನ ನೋಟವನ್ನು ಬದಲಿಸಲು 18 ಹೊಸ ಥೀಮ್ ಬಣ್ಣಗಳು ಮತ್ತು ಕಸ್ಟಮ್ ಆ್ಯಪ್ ಐಕಾನ್ಗಳು.
-
ಅನಿಮೇಟೆಡ್ ಸ್ಟಿಕ್ಕರ್‌ಗಳು: ವಿಶೇಷ ಎಫೆಕ್ಟ್ ಹೊಂದಿರುವ ಹೊಸ ಸ್ಟಿಕ್ಕರ್ ಪ್ಯಾಕ್ಗಳು.
-
ಕಸ್ಟಮ್ ರಿಂಗ್ಟೋನ್: ವಾಟ್ಸಾಪ್ ಕರೆಗಳಿಗಾಗಿ ಪ್ರತ್ಯೇಕ ರಿಂಗ್ಟೋನ್ಗಳನ್ನು ಸೆಟ್ ಮಾಡಬಹುದು.
ಬೆಲೆ ಎಷ್ಟು?
ಈ ಸಬ್‌ಸ್ಕ್ರಿಪ್ಷನ್ ಬೆಲೆ ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತದೆ. ಯುರೋಪ್‌ನಲ್ಲಿ ತಿಂಗಳಿಗೆ 2.49 ಯುರೋಗಳು (ಸುಮಾರು 225 ರೂಪಾಯಿ). ಮೆಕ್ಸಿಕೋದಲ್ಲಿ ತಿಂಗಳಿಗೆ ಸುಮಾರು 2,610 ಭಾರತೀಯ ರೂಪಾಯಿಗಳಷ್ಟು ದುಬಾರಿಯಾಗಿದೆ. ಭಾರತದಲ್ಲಿ ಬೆಲೆ ಎಷ್ಟಿರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಬ್‌ಸ್ಕ್ರಿಪ್ಷನ್ ತೆಗೆದುಕೊಂಡವರು ಯಾವಾಗ ಬೇಕಾದರೂ ರದ್ದುಪಡಿಸಬಹುದು. ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿರುವ ಈ ಸೌಲಭ್ಯ ಭವಿಷ್ಯದಲ್ಲಿ ಐಒಎಸ್ (iOS) ಆವೃತ್ತಿಗೂ ವಿಸ್ತರಿಸಲಿದೆ.
ಬಳಕೆದಾರರಿಗೆ ಆತಂಕ ಬೇಡ
ಸಾಮಾನ್ಯ ಬಳಕೆದಾರರು ಯಾವುದೇ ಹಣ ಪಾವತಿಸದೆಯೇ ವಾಟ್ಸಾಪ್ ಅನ್ನು ಮೊದಲಿನಂತೆ ಬಳಸಬಹುದು. ಪ್ರೀಮಿಯಂ ಫೀಚರ್‌ಗಳನ್ನು ಕಡ್ಡಾಯಗೊಳಿಸಿಲ್ಲ. ನಿಮಗೆ ಹೊಸ ಥೀಮ್‌ಗಳು, ಅನಿಮೇಟೆಡ್ ಸ್ಟಿಕ್ಕರ್‌ಗಳು ಬೇಕಾದರೆ ಮಾತ್ರ ಸಬ್‌ಸ್ಕ್ರಿಪ್ಷನ್ ಪಡೆಯಿರಿ. ವಾಟ್ಸಾಪ್ ತನ್ನ ಆದಾಯದ ಮೂಲವನ್ನು ವೈವಿಧ್ಯಗೊಳಿಸಲು ಈ ನಡೆಯನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೀಮಿಯಂ ಸೌಲಭ್ಯಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.
