GT vs MI: ತಿಲಕ್‌ ವರ್ಮ ಚೊಚ್ಚಲ ಶತಕ, ಗುಜರಾತ್‌ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

Untitled design 2026 04 20T233523.124

ಅಹಮದಾಬಾದ್ (ಎ.20): ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ 2026ರ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 99 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಸತತ ನಾಲ್ಕು ಸೋಲುಗಳ ಬಳಿಕ ಈ ಗೆಲುವು ಮುಂಬೈ ತಂಡಕ್ಕೆ ಆತ್ಮವಿಶ್ವಾಸ ತುಂಬಿದೆ.

ಮೊದಲು ಬ್ಯಾಟಿಂಗ್‌ – ತಿಲಕ್‌ನ ತಾಂಡವ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 199 ರನ್‌ಗಳ ದೈತ್ಯ ಮೊತ್ತ ಕಲೆ ಹಾಕಿತ್ತು. ಎಡಗೈ ಬ್ಯಾಟರ್ ತಿಲಕ್ ವರ್ಮ ಕಳೆದ ಪಂದ್ಯಗಳಲ್ಲಿ ವೈಫಲ್ಯದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಅವರು, ಈ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಕೇವಲ 45 ಎಸೆತಗಳಲ್ಲಿ 7 ಸಿಕ್ಸರ್‌ ಮತ್ತು 8 ಬೌಂಡರಿಗಳ ಸಹಾಯದಿಂದ 101* ರನ್‌ ಗಳಿಸಿದ ತಿಲಕ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಹಾರಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಆಕ್ರಮಣಶೀಲತೆ, ತಾಂತ್ರಿಕತೆ ಮತ್ತು ಆತ್ಮವಿಶ್ವಾಸದ ಅದ್ಭುತ ಸಮ್ಮಿಲನ ಕಾಣಬಂದಿತು. ಶತಕ ಪೂರ್ತಿಯಾದ ತಕ್ಷಣ ಸಂಭ್ರಮಿಸುವ ಮೂಲಕ ತಮ್ಮ ಟೀಕಾಕಾರರಿಗೆ ಮೌನವಾಗಿ ಉತ್ತರಿಸಿದರು. ಶತಕದ ದಾರಿಯಲ್ಲಿ ಅವರಿಗೆ ನಮನ್ ಧೀರ್ (45 ರನ್‌) ಸ್ಥಿರ ಸಾಥ್ ನೀಡಿದರು. ಇವರಿಬ್ಬರ ನಡುವಣ 92 ರನ್‌ಗಳ ಜೊತೆಯಾಟವೇ ಮುಂಬೈ ದೊಡ್ಡ ಮೊತ್ತ ತಲುಪಲು ನೆರವಾಯಿತು.

ಗುಜರಾತ್ ಪತನ – ಅಶ್ವನಿ ಕುಮಾರ್‌ನ ಬೌಲಿಂಗ್‌ ದಾಳಿ

199 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಕುಸಿಯಿತು. ಸಾಯಿ ಸುದರ್ಶನ್ ಗೋಲ್ಡನ್ ಡಕ್ ಆದರೆ, ನಾಯಕ ಶುಭಮನ್ ಗಿಲ್ 15 ರನ್‌ ಬಳಿಕ ಪೆವಿಲಿಯನ್ ಸೇರಿದರು. ಜಾಸ್ ಬಟ್ಲರ್ (5), ಗ್ಲೆನ್ ಫಿಲಿಪ್ಸ್ (6), ರಾಹುಲ್ ತೆವಾಟಿಯ (8)  ಹೀಗೆ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿದರು. ಪವರ್‌ಪ್ಲೇನಲ್ಲೇ ಮುಂಬೈ ಬೌಲರ್ ಗಳು ಗುಜರಾತ್‌ನ ಬೆನ್ನೆಲುಬು ಮುರಿದರು.

ತಂಡದ ಪರ ಅತ್ಯಧಿಕ ಸ್ಕೋರರ್ ಎನಿಸಿಕೊಂಡ ವಾಷಿಂಗ್ಟನ್ ಸುಂದರ್ 26 ರನ್‌ ಮಾತ್ರ ಗಳಿಸಿದರು. ಇನ್ನು ಯಾರಿಗೂ ಎರಡಂಕಿ ದಾಟುವುದು ಕಷ್ಟವಾಯಿತು. ಅಂತಿಮವಾಗಿ ಗುಜರಾತ್ 15.5 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಮುಂಬೈ 99 ರನ್‌ಗಳ ದಾರುಣ ಜಯ ದಾಖಲಿಸಿತು.

 

Exit mobile version