ದೆಹಲಿ: ದೇಶಾದ್ಯಂತ ತಲ್ಲಣ ಮೂಡಿಸುತ್ತಿರುವ ಬೀದಿ ನಾಯಿಗಳ ದಾಳಿ ಮತ್ತು ಸಾರ್ವಜನಿಕ ಸುರಕ್ಷತೆಯ ಕುರಿತಾದ ಸುದೀರ್ಘ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಿದ್ದ ಬಾಲಿವುಡ್‌ನ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್, ಬೀದಿ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವುದನ್ನು ವಿರೋಧಿಸಿದ್ದರು. ಆದರೆ, ಅವರ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ನ್ಯಾಯಾಲಯವು, ನಟಿಯನ್ನು “ವಾಸ್ತವದಿಂದ ದೂರವಿದ್ದೀರಿ” ಎಂದು ಕಟುವಾಗಿ ಟೀಕಿಸಿದೆ.
ಶರ್ಮಿಳಾ ಟ್ಯಾಗೋರ್ ಅವರ ಪರ ವಕೀಲರು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿರುವ ‘ಗೋಲ್ಟಿ’ ಎಂಬ ನಾಯಿಯ ಉದಾಹರಣೆ ನೀಡಿ, ಅದು ಯಾರಿಗೂ ತೊಂದರೆ ಕೊಟ್ಟಿಲ್ಲ, ಹೀಗಾಗಿ ನಾಯಿಗಳನ್ನು ವೈಭವೀಕರಿಸಬೇಕು ಎಂದು ವಾದಿಸಿದರು. ಇದನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್ ಪೀಠವು, ಆ ನಾಯಿಯನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲು ಸಾಧ್ಯವೇ ? ಪ್ರತಿಯೊಂದು ಬೀದಿ ನಾಯಿಯ ಮೈಮೇಲೆ ಉಣ್ಣೆಗಳು (Ticks) ಇರುತ್ತವೆ. ಆಸ್ಪತ್ರೆಯಂತಹ ಜಾಗದಲ್ಲಿ ರೋಗಾಣುಗಳನ್ನು ಹೊತ್ತು ತರುವ ಪ್ರಾಣಿಗಳಿಂದ ಎಷ್ಟು ಹಾನಿಕಾರಕ ಪರಿಣಾಮಗಳಾಗುತ್ತವೆ ಎಂಬ ಅರಿವಿದೆಯೇ ? ಎಂದು ಪ್ರಶ್ನಿಸಿತು. ಆಸ್ಪತ್ರೆಗಳಲ್ಲಿ ನಾಯಿಗಳನ್ನು ವೈಭವೀಕರಿಸುವ ಪ್ರಯತ್ನ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ವಿದೇಶಗಳಾದ ಜಾರ್ಜಿಯಾ ಮತ್ತು ಅರ್ಮೇನಿಯಾದಲ್ಲಿ ಕಚ್ಚುವ ನಾಯಿಗಳನ್ನು ಗುರುತಿಸಲು ‘ಕಲರ್ ಕೋಡಿಂಗ್ ಕಾಲರ್’ (ಬಣ್ಣದ ಕೊರಳಪಟ್ಟಿ) ಹಾಕುವ ಪದ್ಧತಿ ಇದೆ, ಅದನ್ನು ಭಾರತದಲ್ಲೂ ಅಳವಡಿಸಲಿ ಎಂದು ಸಲಹೆ ನೀಡಿದರು. ಇದಕ್ಕೆ ನ್ಯಾಯಾಲಯವು, ಆ ದೇಶಗಳ ಜನಸಂಖ್ಯೆಗೂ ಭಾರತದ ಜನಸಂಖ್ಯೆಗೂ ಹೋಲಿಕೆ ಮಾಡಲು ಸಾಧ್ಯವೇ ? ದಯವಿಟ್ಟು ವಾಸ್ತವಿಕ ಸಲಹೆಗಳನ್ನು ನೀಡಿ ಎಂದು ಅವರ ವಾದವನ್ನು ತಳ್ಳಿಹಾಕಿತು.
ಬೀದಿ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರಕ್ಕೆ ಅಂದಾಜು ₹26,800 ಕೋಟಿ ವೆಚ್ಚವಾಗಬಹುದು ಎಂಬ ಅಂಕಿ-ಅಂಶವನ್ನೂ ಕೋರ್ಟ್ ಗಮನಕ್ಕೆ ತರಲಾಯಿತು. ಸದ್ಯಕ್ಕೆ ಪ್ರಾಣಿಗಳ ಸಂತಾನೋತ್ಪತ್ತಿ ನಿಯಂತ್ರಣ (ABC) ನಿಯಮಗಳ ಪ್ರಕಾರವೇ ಕ್ರಮ ಕೈಗೊಳ್ಳಬೇಕು, ಆದರೆ ಅವುಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ವಿಚಾರಣೆಯ ವೇಳೆ ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವಾನಿ ಅವರು, ನಾಯಿಗಳಿಗೆ ಆಹಾರ ನೀಡುವ ಮಹಿಳೆಯರ ಮೇಲೆ ಸಾರ್ವಜನಿಕರು ಹಲ್ಲೆ ಮಾಡುತ್ತಿದ್ದಾರೆ ಎಂದು ದೂರು ನೀಡಿದರು. ಇದಕ್ಕೆ ಉತ್ತರಿಸಿದ ಕೋರ್ಟ್, ಇದು ಕಾನೂನು ಸುವ್ಯವಸ್ಥೆಯ ಪ್ರಶ್ನೆ. ಯಾರಾದರೂ ಹಲ್ಲೆ ಮಾಡಿದರೆ ಹೋಗಿ ಎಫ್‌ಐಆರ್ ದಾಖಲಿಸಿ ಅಥವಾ ಹೈಕೋರ್ಟ್ ಮೆಟ್ಟಿಲೇರಿ. ಬೀದಿ ನಾಯಿಗಳ ಸಮಸ್ಯೆಯ ಜೊತೆ ಇದನ್ನು ಸೇರಿಸಬೇಡಿ ಎಂದು ಸೂಚಿಸಿತು.





