ನವದೆಹಲಿ: ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಯಿ ಕಡಿತ ಪ್ರಕರಣಗಳು ಮತ್ತು ರೇಬೀಸ್ ರೋಗದ ಹರಡುವಿಕೆಯನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶಗಳನ್ನು ಹೊರಡಿಸಿದೆ.ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ಶಾಲೆಗಳು, ಆಸ್ಪತ್ರೆಗಳು, ಬಸ್ ಹಾಗೂ ರೈಲು ನಿಲ್ದಾಣಗಳು ಮತ್ತು ಕ್ರೀಡಾಂಗಣಗಳು ಪ್ರಮುಖ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ಆದೇಶ ನೀಡಿದ್ದು, ಎಂಟು ವಾರಗಳೊಳಗೆ ತೆರವು ಕಾರ್ಯಾಚರಣೆ ಪೂರ್ಣಗೊಳಿಸಬೇಕು ಎಂದು ಸ್ಪಷ್ಟ ಸೂಚಿಸಿದೆ. ಅಲ್ಲದೆ, ತೆರವು ಮಾಡಿದ ನಾಯಿಗಳನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಬಾರದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಕೋರ್ಟ್ ತನ್ನ ಆದೇಶದಲ್ಲಿ ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣಗಳು, ಕ್ರೀಡಾ ಸೌಲಭ್ಯಗಳು ಮತ್ತು ರೈಲು ನಿಲ್ದಾಣಗಳಲ್ಲಿ ಬೀದಿ ನಾಯಿಗಳು ಇರಬಾರದು. ಸಾರ್ವಜನಿಕರ ಸುರಕ್ಷತೆ ಅತ್ಯಂತ ಮುಖ್ಯ.” ಎಂದು ಹೇಳಿದೆ.
ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತಗಳಿಗೆ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಮನ್ವಯ ಸಾಧಿಸಲು ಸೂಚಿಸಿದೆ. ಸರ್ಕಾರಗಳು ಪ್ರಾಣಿ ದಯಾ ಸಂಘಗಳು (Animal Welfare Organizations) ಮತ್ತು ಆಶ್ರಯ ಕೇಂದ್ರಗಳೊಂದಿಗೆ ಸಹಕಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಬೀದಿ ನಾಯಿಗಳ ಲಸಿಕೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕಾರ್ಯಾಚರಣೆಯನ್ನು ವೇಗಗೊಳಿಸಲು ಕೋರ್ಟ್ ಆದೇಶಿಸಿದೆ.
ಕೋರ್ಟ್ ಸೂಚಿಸಿದಂತೆ, ಬೀದಿ ನಾಯಿಗಳನ್ನು ನೇರವಾಗಿ ಕೊಲ್ಲುವುದಲ್ಲ, ಅವುಗಳನ್ನು ಗುರುತಿಸಲ್ಪಟ್ಟ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಅಲ್ಲಿಯೇ ಅವುಗಳಿಗೆ ತಕ್ಕ ಆಹಾರ, ವೈದ್ಯಕೀಯ ಆರೈಕೆ, ಮತ್ತು ಲಸಿಕೆ ನೀಡಬೇಕು ಎಂದು ಹೇಳಲಾಗಿದೆ.
ದಿಲ್ಲಿಯಲ್ಲಿನ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಅತಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜುಲೈ 28 ರಂದು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು. ವರದಿಗಳ ಪ್ರಕಾರ, ಶಾಲಾ ವಿದ್ಯಾರ್ಥಿಗಳು, ಹಿರಿಯರು ಹಾಗೂ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಪ್ರಮಾಣ ಹೆಚ್ಚಾಗಿದೆ. ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 13, 2026ಕ್ಕೆ ನಿಗದಿಪಡಿಸಿದೆ.





