ದ್ರಾಸ್ ಲಡಾಖ್ (ಜುಲೈ 27): 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ತ್ಯಾಗ, ಬಲಿದಾನ ಮತ್ತು ಶೌರ್ಯವನ್ನು ಸ್ಮರಿಸುವ ಉದ್ದೇಶದಿಂದ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿ ‘ಶೌರ್ಯ ವಿಜಯ್ ಯಾತ್ರೆ’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಹೊಸದಿಲ್ಲಿಯ ‘ರಾಷ್ಟ್ರೀಯ ಯುದ್ಧ ಸ್ಮಾರಕ’ದಿಂದ ಆರಂಭವಾದ ಈ 1,900 ಕಿಲೋಮೀಟರ್ ಉದ್ದದ ಸಾಹಸಮಯ ಬೈಕ್ ಪಯಣವು, ಕಾರ್ಗಿಲ್ ವಿಜಯ್ ದಿವಸವಾದ ಜುಲೈ 26ರಂದು ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಅಂತ್ಯಗೊಂಡಿತು.
ದೆಹಲಿಯಿಂದ ದ್ರಾಸ್‌ಗೆ ‘ಪವಿತ್ರ ಮಣ್ಣಿನ’ ಪಯಣ
ದೇಶದ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಪ್ರಾಣತೆತ್ತ ಯೋಧರ ಸಂಕೇತವಾಗಿ ಹೊಸದಿಲ್ಲಿಯ ಯುದ್ಧ ಸ್ಮಾರಕದ ‘ಪವಿತ್ರ ಮಣ್ಣʼನ್ನು ಗೌರವಪೂರ್ವಕವಾಗಿ ದ್ರಾಸ್‌ನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತರಲಾಗಿತ್ತು. ಇದು ಈ ಬೈಕ್ ಯಾತ್ರೆಯ ಅತ್ಯಂತ ಭಾವುಕ ಹಾಗೂ ಪ್ರಮುಖ ಘಟ್ಟವಾಗಿತ್ತು.
ಹಿಮಾಚಲ ಪ್ರದೇಶ ಹಾಗೂ ಲಡಾಖ್‌ನ ಕಠಿಣ ಗುಡ್ಡಗಾಡು ರಸ್ತೆಗಳಲ್ಲಿ ಸಾಗಿದ ಈ ಯಾತ್ರೆಯಲ್ಲಿ ಮಾರ್ಗ ಮಧ್ಯೆ ಚಂಡಿಮಂದಿರ, ರೆಜಾಂಗ್ ಲಾ ಮತ್ತು ಲೇಹ್ ಯುದ್ಧ ಸ್ಮಾರಕಗಳಿಗೆ ಭೇಟಿ ನೀಡಿ ಯೋಧರಿಗೆ ಗೌರವ ನಮನವನ್ನೂ ಸಲ್ಲಿಸಲಾಯಿತು.
ಬೈಕ್ ಯಾತ್ರೆಗೆ ಚಾಲನೆ ನೀಡಿದ್ದ ರಕ್ಷಣಾ ಸಚಿವರು
ಈ ವರ್ಷದ ಬೈಕ್ ಯಾತ್ರೆಗೆ ಸ್ವತಃ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಿಲ್ಲಿಯಲ್ಲಿ ಹಸಿರು ನಿಶಾನೆ ತೋರಿದ್ದರು. ಹಾಲಿ ಮತ್ತು ನಿವೃತ್ತ ಸೇನಾ ಅಧಿಕಾರಿಗಳು, ಹುತಾತ್ಮ ಯೋಧರ ಪತ್ನಿಯರು, ಹುತಾತ್ಮರ ಕುಟುಂಬಸ್ಥರು ಹಾಗೂ ಸಾಮಾನ್ಯ ನಾಗರಿಕರು ಹೆಗಲಿಗೆ ಹೆಗಲು ಕೊಟ್ಟು ಈ ಬೈಕ್ ಪ್ರಯಾಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
2021ರಲ್ಲಿ ಜಾವಾ ಯೆಜ್ಡಿ ಸಂಸ್ಥೆ ಶುರುಮಾಡಿದ ಈ ಬೈಕ್ ಯಾತ್ರೆ ಇಂದು ಕೇವಲ ಸೇನೆಗೆ ಮಾತ್ರ ಸೀಮಿತವಾಗದೆ, ದೇಶದ ಸೈನಿಕರ ಸಾಹಸಗಾಥೆಗಳನ್ನು ಸಾಮಾನ್ಯ ಜನರ ಮನೆ-ಮನಗಳಿಗೆ ತಲುಪಿಸುವ ಒಂದು ವಿಶಿಷ್ಟ ‘ನಾಗರಿಕ – ಸೇನಾ ಅಭಿಯಾನ’ವಾಗಿ ಬೆಳೆದು ನಿಂತಿದೆ.
ಕಠಿಣ ಹಾದಿ ಸವೆಸಿದ ಜಾವಾ ಮತ್ತು ಯೆಜ್ಡಿ ಬೈಕ್‌ಗಳು
ಎತ್ತರದ ಪರ್ವತಗಳು, ಕಡಿದಾದ ತಿರುವುಗಳು ಹಾಗೂ ದುರ್ಗಮ ರಸ್ತೆಗಳನ್ನು ಸೀಳಿಕೊಂಡು ಸಾಗಲು ಈ ರ್‍ಯಾಲಿಯಲ್ಲಿ ಜಾವಾ 350, ಜಾವಾ 42, ಜಾವಾ 42 ಎಫ್‌ಜೆ, ಯೆಜ್ಡಿ ಅಡ್ವೆಂಚರ್ ಮತ್ತು ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್‌ಗಳನ್ನು ಬಳಸಲಾಗಿತ್ತು. ಈ ಬೈಕ್‌ಗಳು ಕಠಿಣ ಹವಾಮಾನದಲ್ಲೂ ಸವಾರರಿಗೆ ಅತ್ಯುತ್ತಮ ಸಾಥ್ ನೀಡಿದವು.
ʼಯೋಧರ ಶೌರ್ಯದ ಕಥೆ ಮುಂದಿನ ಪೀಳಿಗೆಗೆ ತಲುಪಬೇಕುʼ
ಈ ಬಗ್ಗೆ ಪ್ರತಿಕ್ರಿಯಿಸಿದ ಜಾವಾ ಯೆಜ್ಡಿ ಮಾತೃಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಭಾರತದ ವೀರ ಯೋಧರ ಕಥೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂಬುದೇ ಈ ಶೌರ್ಯ ವಿಜಯ್ ಯಾತ್ರೆಯ ಮುಖ್ಯ ಉದ್ದೇಶ. ದಿಲ್ಲಿಯಿಂದ ದ್ರಾಸ್‌ವರೆಗಿನ ಪ್ರತಿಯೊಂದು ಕಿಲೋಮೀಟರ್ ಪಯಣವೂ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರಿಗೆ ಅರ್ಪಿತವಾಗಿದೆ. ಸೇನೆ, ವೀರ ನಾರಿಯರು ಮತ್ತು ನಾಗರಿಕರ ಜೊತೆ ಸೇರಿ ಈ ಯಾತ್ರೆ ಮಾಡಿದ್ದು ನಮಗೆ ಹೆಮ್ಮೆ ತಂದಿದೆ” ಎಂದರು.
ಈ ಯಾತ್ರೆಯೊಂದಿಗೆ ಕಾರ್ಗಿಲ್ ವಿಜಯ್ ದಿವಸ್‌ನ ವಿಶೇಷ ದಿನದಂದು ದ್ರಾಸ್‌ನಲ್ಲಿ ಜಮಾಯಿಸಿದ ಬೈಕ್ ಸವಾರರು, ದೇಶಕ್ಕಾಗಿ ಮಡಿದ ವೀರ ಯೋಧರ ಬಲಿದಾನವನ್ನು ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡುವಲ್ಲಿ ಹಾಗೂ ಯುವಜನತೆಯಲ್ಲಿ ದೇಶಭಕ್ತಿ ಬಡಿದೆಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆ.





