ಮಹಾರಾಷ್ಟ್ರದ ವಸೈನಲ್ಲಿ ಶುಕ್ರವಾರ (ನವೆಂಬರ್ 14, 2025) ನಡೆದ ದುರಂತ ಘಟನೆಯೊಂದು ದೇಶಾದ್ಯಂತ ಆಘಾತ ಮೂಡಿಸಿದೆ. ಶ್ರೀ ಹನುಮಂತ್ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿನಿ ಕಾಜಲ್ ಗೊಂಡ್ (ವಯಸ್ಸು 12) ಶಿಕ್ಷಕಿ ನೀಡಿದ ಕಠಿಣ ಶಿಕ್ಷೆಯಿಂದ ಮೃತಪಟ್ಟಿದ್ದಾಳೆ. ಶಾಲೆಗೆ ಕೇವಲ ಹತ್ತು ನಿಮಿಷ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ 100 ಸಿಟಪ್ಸ್ ಮಾಡಲು ಆದೇಶಿಸಿದ್ದರು. ಇದರಿಂದ ಬಾಲಕಿ ಜೀವಕ್ಕೆ ಕುತ್ತು ತಂದಿದೆ.
ಕಾಜಲ್ ಗೊಂಡ್ ಎಂಬ ಆರನೇ ತರಗತಿ ವಿದ್ಯಾರ್ಥಿನಿ ಶುಕ್ರವಾರ ಬೆಳಗ್ಗೆ ಶಾಲೆಗೆ 10 ನಿಮಿಷ ತಡವಾಗಿ ಆಗಮಿಸಿದಳು. ಇದಕ್ಕಾಗಿ ಶಿಕ್ಷಕಿ ಅವಳಿಗೆ 100 ಸಿಟಪ್ಸ್ ಮಾಡಲು ಆದೇಶಿಸಿದರು. ಬಾಲಕಿಯ ಹೆಗಲ ಮೇಲಿನ ಸ್ಕೂಲ್ ಬ್ಯಾಗ್ ತೆಗೆಯಲು ಶಿಕ್ಷಕಿ ಅವಕಾಶ ನೀಡಲಿಲ್ಲ. ಭಾರದ ಬ್ಯಾಗ್ ಹೊತ್ತುಕೊಂಡೇ ಸಿಟಪ್ಸ್ ಮಾಡಿಸಿದ್ದರಿಂದ ಬಾಲಕಿಯ ದೇಹಕ್ಕೆ ಅಪಾರ ಒತ್ತಡವಾಗಿದೆ ಎಂದು ಬಾಲಕಿಯ ಪೋಷಕರು ಆರೋಪ ಮಾಡಿದ್ದಾರೆ.
ಶಿಕ್ಷೆ ಮುಗಿದ ಕೂಡಲೇ ಕಾಜಲ್ ಬೆನ್ನು ನೋವು ತೀವ್ರವಾಗಿ ಆಯಾಸಗೊಂಡಿದ್ದಳು. ಸ್ವಲ್ಪ ಹೊತ್ತಿನಲ್ಲೇ ಅವಳು ಕುಸಿದು ಬಿದ್ದಳು. ತಕ್ಷಣ ಶಾಲಾ ಸಿಬ್ಬಂದಿ ಅವಳನ್ನು ಸಮೀಪದ ನಲಸೋಪಾರ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆರೋಗ್ಯ ಸ್ಥಿತಿ ವೇಗವಾಗಿ ಹದಗೆಟ್ಟಿದ್ದರಿಂದ ಅವಳನ್ನು ಮುಂಬೈನ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತೀವ್ರ ಚಿಕಿತ್ಸೆ ನೀಡಿದರೂ ಕಾಜಲ್ ಮೃತಪಟ್ಟಿದ್ದಾಳೆ. ವೈದ್ಯಕೀಯ ವರದಿಯ ಪ್ರಕಾರ, ಅತಿಯಾದ ದೈಹಿಕ ಒತ್ತಡ, ಹೃದಯ ಸಂಬಂಧಿತ ಸಮಸ್ಯೆ ಮತ್ತು ಆಂತರಿಕ ರಕ್ತಸ್ರಾವ ಸಾವಿಗೆ ಕಾರಣವಾಯಿತು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ನಮ್ಮ ಮಗಳು ಕೇವಲ 10 ನಿಮಿಷ ತಡವಾಗಿ ಬಂದಿದ್ದಕ್ಕೆ ಇಷ್ಟೊಂದು ಕಠಿಣ ಶಿಕ್ಷೆ ನೀಡಿದ್ದಾರೆ. ಬ್ಯಾಗ್ ತೆಗೆಯಲು ಬಿಡದೇ ಸಿಟಪ್ಸ್ ಮಾಡಿಸಿದ್ದಾರೆ. ಇದೇ ಅವಳ ಸಾವಿಗೆ ಕಾರಣ ಕಾಜಲ್‌ರ ಪೋಷಕರು ಶಿಕ್ಷಕಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಾವಿನ ಸುದ್ದಿ ತಿಳಿದ ತಕ್ಷಣ ಪೋಷಕರು, ಸಂಬಂಧಿಕರು ಮತ್ತು ಸ್ಥಳೀಯರು ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. ಶಿಕ್ಷಕಿ ಮತ್ತು ಶಾಲಾ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಪ್ರತಿಭಟನೆ ಉಗ್ರರೂಪ ಪಡೆದಾಗ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕೂಡಾ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿದೆ. ಕ್ರಿಮಿನಲ್ ಪ್ರಕರಣ ದಾಖಲಿಸುವವರೆಗೂ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. MNS ಕಾರ್ಯಕರ್ತರು ಶಾಲೆ ಮುಂದೆ ಧರಣಿ ನಡೆಸುತ್ತಿದ್ದಾರೆ.
ವಸೈ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಮತ್ತು ಶಾಲಾ ಪ್ರಾಂಶುಪಾಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. IPC ಸೆಕ್ಷನ್ 304-A (ಅಜಾಗರೂಕತೆಯಿಂದ ಸಾವು) ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಶವಪರೀಕ್ಷೆ ನಡೆಸಲಾಗುತ್ತಿದ್ದು, ಅಂತಿಮ ವರದಿ ಬಂದ ನಂತರ ಇನ್ನಷ್ಟು ಕಾನೂನು ಕ್ರಮ ತೆಗೆದಿಕೊಳ್ಳುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಶಿಕ್ಷಣ ಇಲಾಖೆ ಘಟನೆಯ ಕುರಿತು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ. ಶಾಲೆಯಲ್ಲಿ ಶಾರೀರಿಕ ಶಿಕ್ಷೆ ನೀಡುವ ನಿಯಮಗಳನ್ನು ಪರಿಶೀಲಿಸಲಾಗುತ್ತಿದೆ. ಮಕ್ಕಳ ಮೇಲೆ ಯಾವುದೇ ರೀತಿಯ ಶಾರೀರಿಕ ಶಿಕ್ಷೆ ನೀಡುವಂತಿಲ್ಲ ಎಂಬ RTE ಕಾಯ್ದೆಯಡಿ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ.





